ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ: 8ನೆ ದಿನಕ್ಕೆ ಕಾಲಿಟ್ಟ ಹೋರಾಟಗಾರರ ಧರಣಿ

Update: 2019-11-10 11:49 GMT

ಬೆಂಗಳೂರು, ನ.10: ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸೋಮವಾರಕ್ಕೆ 8ನೆ ದಿನಕ್ಕೆ ಕಾಲಿಟ್ಟಿದೆ.

ರವಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕರ್ನಾಟಕ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ವರದಿ ಜಾರಿಗಾಗಿ ಆಗ್ರಹಿಸಿ ಘೋಷಣೆ ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಚಳುವಳಿ ನಾಗೇಶ್, ಕರ್ನಾಟಕ ಏಕೀಕರಣಗೊಂಡ ನಂತರ ರಾಜ್ಯದಲ್ಲಿ ಆಡಳಿತ ನಡೆಸಿದ ಯಾವುದೇ ಸರಕಾರ ನಾಡಿನಲ್ಲಿ ಕನ್ನಡಿಗರ ಉದ್ಯೋಗಕ್ಕೆ ಆದ್ಯತೆ ನೀತಿ ಜಾರಿಗೊಳಿಸಿಲ್ಲ. ನಾಡಿನಲ್ಲಿ ಸ್ಥಾಪನೆಗೊಳ್ಳುವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿಲ್ಲ. ಹೀಗಾಗಿ, ಕನ್ನಡ ನಾಡಿನಲ್ಲಿ ಕನ್ನಡಿಗರೇ ನಿರುದ್ಯೋಗಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಡಿನಲ್ಲಿ ಸ್ಥಾಪನೆಯಾಗುವ ಕಂಪೆನಿಗಳಲ್ಲಿ ಶೇ.80ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಸರೋಜಿನಿ ಮಹಿಷಿ ನೇತೃತ್ವದ ಸಮಿತಿಯು 1983ರಲ್ಲೇ ವರದಿ ನೀಡಿದೆ. ಆದರೆ, ಯಾವುದೇ ರಾಜಕೀಯ ಪಕ್ಷಗಳು ಈ ವರದಿಯನ್ನು ಅನುಷ್ಠಾನಕ್ಕೆ ತರದೆ ಕನ್ನಡಿಗರಿಗೆ ಅನ್ಯಾಯ ಎಸಗಿವೆ ಎಂದು ದೂರಿದರು.

ಉದ್ಯೋಗದ ಹಕ್ಕು ಪಡೆದುಕೊಳ್ಳಲು ಕನ್ನಡಿಗರು ಹೋರಾಟ ನಡೆಸುತ್ತಿದ್ದರೂ ಸರಕಾರ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಸ್ವಾಭಿಮಾನ ಶೂನ್ಯ ಜನಪ್ರತಿನಿಧಿಗಳು ಹಾಗೂ ಸರಕಾರದ ಅವೈಜ್ಞಾನಿಕ ನೀತಿಯಿಂದ ಕನ್ನಡಿಗರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ಅಧ್ಯಕ್ಷ ಆರ್.ಪಿ.ಗೋಪಾಲಗೌಡ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಸೇರಿದಂತೆ ಪ್ರಮುಖ ಹೋರಾಟಗಾರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News