ಯಾದವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಗತ್ಯ ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-11-10 15:48 GMT

ಬೆಂಗಳೂರು, ನ.10: ರಾಜ್ಯ ಸರಕಾರವು ಯಾದವ ಸಮುದಾಯದ ನ್ಯಾಯ ಸಮ್ಮತವಾದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾದವ ಸಮುದಾಯಕ್ಕಾಗಿ ಪ್ರತ್ಯೇಕವಾದ ಅಭಿವೃದ್ಧಿ ನಿಗಮ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ರವಿವಾರ ನಗರದ ಕೆ.ಆರ್.ಪುರದಲ್ಲಿರುವ ಎಸ್‌ಇಎ ಶೈಕ್ಷಣಿಕ ಸಂಸ್ಥೆಯಲ್ಲಿ ಅಖಿಲ ಭಾರತ ಯಾದವ ಮಹಾಸಭಾ ಮತ್ತು ಕರ್ನಾಟಕ ರಾಜ್ಯ ಯಾದವ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಕಾರಿ ಪರಿಷತ್ತಿನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಾಣಸವಾಡಿಯಲ್ಲಿ ರಾಜ್ಯ ಯಾದವ ಸಮುದಾಯದ ಭವನ ನಿರ್ಮಾಣಕ್ಕೆ 3 ಕೋಟಿ ರೂ.ಬಿಡುಗಡೆ ಮಾಡಲಾಗುವುದು. ಅಲ್ಲದೇ, ರಾಜ್ಯಾದ್ಯಂತ ಇರುವ ಗೊಲ್ಲರ ಹಟ್ಟಿಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು. ಯಾದವ ಸಮುದಾಯದ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ರೂ.ಬಿಡುಗಡೆ ಮಾಡುವುದಾಗಿ ಅವರು ಘೋಷಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಭಾಷಣ ಮಾಡುವ ವೇಳೆ ಕೆಲವು ಸಭಿಕರು, ಯಾದವ ಸಮುದಾಯದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಸಭಿಕರನ್ನು ಗದರಿಸಿದ ಮುಖ್ಯಮಂತ್ರಿ, ಸುಮ್ಮನೆ ಇರೀ, ಹಾಗೆಲ್ಲ ನಾನು ಎಲ್ಲ ಭರವಸೆಗಳನ್ನು ಕೊಡಲು ಆಗುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಹಿಂದೂ ಸಮಾಜದ ಪ್ರತೀಕ ಭಗವಾನ್ ಶ್ರೀಕೃಷ್ಣ. ಕೃಷ್ಣ ಮತ್ತು ಕನಕದಾಸರಿಗೆ ಅವಿನಾಭಾವ ಸಂಬಂಧವಿದೆ. ಇವರಿಬ್ಬರನ್ನೂ ಬ್ರಾಹ್ಮಣರು ಬಂದು ಪೂಜೆ ಮಾಡುತ್ತಾರೆ ಎಂದರು.

ಈಶ್ವರಪ್ಪ ಮಾತನಾಡುವ ವೇಳೆ ಕೆಲವರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಸದ್ಯದ ರಾಜ್ಯದ ರಾಜಕೀಯ ಪರಿಸ್ಥಿತಿ ಎಲ್ಲರಿಗೂ ಗೊತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಇನ್ನು 15 ಸ್ಥಾನಗಳು ಹೆಚ್ಚು ಬಂದಿದ್ದರೆ, ಇವತ್ತು ಪೂರ್ಣಿಮಾ ಸಚಿವರಾಗಿರುತ್ತಿದ್ದರು ಎಂದರು.

ಮುಂದಿನ ದಿನಗಳಲ್ಲಿ ಪೂರ್ಣಿಮಾ ಖಂಡಿತವಾಗಿಯೂ ಸಚಿವೆ ಆಗುತ್ತಾರೆ. ಈ ಸಂಬಂಧ ಯಾರಿಗೂ ಅನುಮಾನ ಬೇಡ. ವಿದ್ಯಾಕ್ಷೇತ್ರದಲ್ಲಿ ಪೂರ್ಣಿಮಾ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಕೆಲಸವು ಆಗಬೇಕಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಕೃಷ್ಣ ಯಾದವ ಸಂಸ್ಥಾನದ ಶ್ರೀ ಯಾದವಾನಂದ ಸ್ವಾಮೀಜಿ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಉತ್ತರಪ್ರದೇಶದ ಸಂಸದ ಸುಖಾರಾಂ ಸಿಂಗ್ ಯಾದವ್, ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಮಾಜಿ ಸಂಸದ ಉದಯ್ ಪ್ರತಾಪ್ ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News