ಫೆಡ್ ಕಪ್ ಬಾಚಿಕೊಂಡ ಫ್ರಾನ್ಸ್

Update: 2019-11-10 18:48 GMT

ಪರ್ತ್(ಆಸ್ಟ್ರೇಲಿಯ), ನ.10: ಕ್ರಿಸ್ಟಿನಾ ಮ್ಲಾಡೆನೊವಿಕ್ ಹಾಗೂ ಕರೊಲಿನ್ ಗಾರ್ಸಿಯಾ ನೇತೃತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದ ಫ್ರಾನ್ಸ್ ತಂಡ 2003ರ ಬಳಿಕ ಮೊದಲ ಬಾರಿ ಫೆಡ್ ಕಪ್ ಪ್ರಶಸ್ತಿಯನ್ನು ಬಾಚಿಕೊಂಡಿತು.

ನಿರ್ಣಾಯಕ 5ನೇ ಡಬಲ್ಸ್ ಪಂದ್ಯವನ್ನು ಜಯಿಸಿದ ಫ್ರಾನ್ಸ್ ತಂಡ ಆಸ್ಟ್ರೇಲಿಯ ತಂಡವನ್ನು 3-2 ಅಂತರದಿಂದ ಸದೆಬಡಿಯಿತು.

ಮ್ಲಾಡೆನೊವಿಕ್ ಹಾಗೂ ಗಾರ್ಸಿಯಾ ಪರ್ತ್ ಅರೆನಾದಲ್ಲಿ ರವಿವಾರ ಆಸ್ಟ್ರೇಲಿಯದ ಆ್ಯಶ್ಲೆ ಬಾರ್ಟಿ ಹಾಗೂ ಸಮಂತಾ ಸ್ಟೋಸರ್‌ರನ್ನು 6-4, 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ಈ ಮೂಲಕ 45 ವರ್ಷಗಳ ಬಳಿಕ ಮೊದಲ ಬಾರಿ ಫೆಡ್ ಕಪ್ ಜಯಿಸುವ ಆಸೀಸ್ ಕನಸನ್ನು ಭಗ್ನಗೊಳಿಸಿದರು.

ಇದು ಫ್ರಾನ್ಸ್‌ಗೆ ಒಟ್ಟಾರೆ ಮೂರನೇ ಪ್ರಶಸ್ತಿ ಹಾಗೂ 16 ವರ್ಷಗಳ ಹಿಂದೆ ಅಮೆರಿಕ ತಂಡವನ್ನು ಸೋಲಿಸಿದ ಬಳಿಕ ಮೊದಲ ಟ್ರೋಫಿಯಾಗಿದೆ. ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ಕಳೆದ 9 ಫೆಡ್ ಕಪ್ ಫೈನಲ್ಸ್ ಗಳ ಪೈಕಿ ಎಲ್ಲ ಪಂದ್ಯಗಳನ್ನು ಸೋತಿದೆ. 2016ರ ಫ್ರೆಂಚ್ ಓಪನ್ ಡಬಲ್ಸ್ ಪ್ರಶಸ್ತಿ ಜಯಿಸಿರುವ ಮ್ಲಾಡೆನೊವಿಕ್ ಹಾಗೂ ಗಾರ್ಸಿಯಾ ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿದರು. ರವಿವಾರ ರಿವರ್ಸ್ ಸಿಂಗಲ್ ್ಸನಲ್ಲಿ ಮ್ಲಾಡೆನೊವಿಕ್‌ರಿಂದ ಆಘಾತಕಾರಿ ಸೋಲನುಭವಿಸಿದ್ದ ವಿಶ್ವದ ನಂ.1 ಆಟಗಾರ್ತಿ ಬಾರ್ಟಿ ಆಸ್ಟ್ರೇಲಿಯ ಪ್ರತಿಹೋರಾಟ ನೀಡಲು ಸಾಥ್ ನೀಡಿದರು.ಆದರೆ, ಫ್ರಾನ್ಸ್ ಜೋಡಿ ಉತ್ತಮ ಪ್ರದರ್ಶನ ನೀಡಿ ಬಾರ್ಟಿ-ಸ್ಟೋಸರ್ ಪ್ರಯತ್ನವನ್ನು ವಿಫಲಗೊಳಿಸಿತು. ಇದಕ್ಕೂ ಮೊದಲು ನಡೆದ ಸಿಂಗಲ್ಸ್ ಪಂದ್ಯದಲ್ಲಿ 40ನೇ ರ್ಯಾಂಕಿನ ಮ್ಲಾಡನೊವಿಕ್, ಬಾರ್ಟಿ ಅವರನ್ನು 2-6, 6-4,7-6(7/1) ಸೆಟ್‌ಗಳಿಂದ ಸೋಲಿಸಿ ಶಾಕ್ ನೀಡಿದರು.

ಫ್ರಾನ್ಸ್‌ನ ಪೌಲಿನ್ ಪಾರ್ಮೆಂಟಿಯರ್‌ರನ್ನು 6-4, 7-5 ಸೆಟ್‌ಗಳ ಅಂತರದಿಂದ ಸೋಲಿಸಿದ ಕ್ರೊಯೇಶಿಯ ಸಂಜಾತೆ ಅಜ್ಲಾ ಟೊಮ್‌ಜಾನೊವಿಕ್ ಆಸ್ಟ್ರೇಲಿಯ ತಂಡ 2-2ರಿಂದ ಸಮಬಲ ಸಾಧಿಸಲು ನೆರವಾದರು. ಡಬಲ್ಸ್ ಪಂದ್ಯಕ್ಕೆ ವೇದಿಕೆ ನಿರ್ಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News