ಅಯೋಧ್ಯೆ ತೀರ್ಪು ನಿರಾಶೆಯನ್ನುಂಟು ಮಾಡಿದೆ: ‘ರಾಮ್ ಕೆ ನಾಮ್’ ಚಿತ್ರದ ನಿರ್ದೇಶಕ ಪಟವರ್ಧನ್

Update: 2019-11-11 14:00 GMT
ಫೋಟೊ: mynation

ಮುಂಬೈ,ನ.11: ಅಯೋಧ್ಯೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ತನಗೆ ತೀವ್ರ ನಿರಾಶೆ ಮತ್ತು ಆಘಾತವನ್ನುಂಟು ಮಾಡಿದೆ ಎಂದು ಪ್ರಶಸ್ತಿ ಪುರಸ್ಕೃತ ಸಾಕ್ಷ್ಯಚಿತ್ರ ‘ರಾಮ್ ಕೆ ನಾಮ್’ನ ನಿರ್ದೇಶಕ ಆನಂದ ಪಟವರ್ಧನ್ ಅವರು ಸೋಮವಾರ ಇಲ್ಲಿ ಹೇಳಿದರು.

ಪಟವರ್ಧನ್ ‘ರಾಮ್ ಕೆ ನಾಮ್ ’ ನಿರ್ಮಾಣದ ಸಂದರ್ಭ ಅಕ್ಟೋಬರ್,1990ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಬಾಬರಿ ಮಸೀದಿಯ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಅಭಿಯಾನ ಮತ್ತು ಅದು ಸೃಷ್ಟಿಸಿದ್ದ ಹಿಂಸಾಚಾರಗಳನ್ನು ಚಿತ್ರವು ಪ್ರಮುಖವಾಗಿ ಬಿಂಬಿಸಿತ್ತು.

ಬಾಬರಿ ಮಸೀದಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲಾಗಿತ್ತು. ಅದು ಮುಸ್ಲಿಮರಿಗೆ ಮಾತ್ರವಲ್ಲ,ಎಲ್ಲ ಭಾರತೀಯರಿಗೂ ಸೇರಿತ್ತು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಟವರ್ಧನ್ ಹೇಳಿದರು. ಬಾಬರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ್ದ ರಾಜಕೀಯ ನಾಯಕರು ಎಂದೂ ಜೈಲಿಗೆ ಹೋಗಲಿಲ್ಲ. ಬದಲಿಗೆ ಈಗ ಅವರಿಗೆ ಪುರಸ್ಕಾರ ನೀಡಲಾಗಿದೆ ಎಂದರು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರು ನಮಗೆ ಬಿಟ್ಟುಹೋಗಿದ್ದ ಮೌಲಿಕ ವ್ಯವಸ್ಥೆಯನ್ನು ಪರಿಶ್ರಮದಿಂದ ಪುನರ್‌ನಿರ್ಮಿಸಿದರೆ ಮಾತ್ರ ಜಾತ್ಯತೀತ ಭಾರತವು ಈ ಸ್ಥಿತಿಯಿಂದ ಚೇತರಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

ಪಟವರ್ಧನ್ ಅವರು ಸಾಕ್ಷ್ಯಚಿತ್ರವನ್ನು ನಿರ್ಮಿಸಿದ ಬಳಿಕ 1997 ಜನವರಿಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯ ದೂರದರ್ಶನದಲ್ಲಿ ಅದರ ಪ್ರಸಾರಕ್ಕೆ ಆದೇಶಿಸಿತ್ತು. ಅವರು 1990ರಲ್ಲಿ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿಯವರ ರಥಯಾತ್ರೆಯನ್ನು ಚಿತ್ರೀಕರಿಸಿದ್ದರು.

ಆಯೋಧ್ಯೆಗೆ ತನ್ನ ಭೇಟಿಯ ಸಂದರ್ಭದಲ್ಲಿ ಬಾಬರಿ ಮಸೀದಿಯ ಆವರಣದಲ್ಲಿಯ ಮಂದಿರವೊಂದಕ್ಕೆ ನ್ಯಾಯಾಲಯದಿಂದ ನೇಮಕಗೊಂಡಿದ್ದ ಅರ್ಚಕ ಲಾಲದಾಸ್ ಅವರ ಸಂದರ್ಶನವನ್ನು ನಡೆಸಿದ್ದರು. ಹಿಂದುತ್ವ ಶಕ್ತಿಗಳು ರಾಜಕೀಯ ಅಧಿಕಾರ ಮತ್ತು ಹಣಕ್ಕಾಗಿ ಹಪಹಪಿಸುತ್ತಿವೆ ಎಂದು ದಾಸ್ ಆರೋಪಿಸಿದ್ದರು.

1993ರಲ್ಲಿ ದಾಸ್ ಅವರ ಹತ್ಯೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News