ಸರಕಾರ ರಚಿಸುವಂತೆ ಎನ್ ಸಿಪಿಗೆ ಮಹಾರಾಷ್ಟ್ರ ರಾಜ್ಯಪಾಲರ ಆಹ್ವಾನ

Update: 2019-11-11 16:49 GMT

ಮುಂಬೈ, ನ.11: ಮಹಾರಾಷ್ಟ್ರದ ರಾಜ್ಯಪಾಲರು ಎನ್ ಸಿಪಿಗೆ 24 ಗಂಟೆಗಳ ಕಾಲಾವಕಾಶ ನೀಡಿದ್ದು, ಸರಕಾರ ರಚನೆಗೆ ಪಕ್ಷವನ್ನು ಆಹ್ವಾನಿಸಿದ್ದಾರೆ.

ರಾಜ್ಯದಲ್ಲಿ ಸರಕಾರ ರಚನೆಯ ಗೊಂದಲ ಮುಂದುವರಿದಿರುವಂತೆಯೇ ರಾಜ್ಯಪಾಲರು ಎನ್ ಸಿಪಿಗೆ ಈ ಕರೆ ನೀಡಿದ್ದಾರೆ. ಈಗಾಗಲೇ ಆದಿತ್ಯ ಠಾಕ್ರೆ ಸಹಿತ ಶಿವಸೇನೆಯ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿದ್ದು, 48 ಗಂಟೆಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ರಾಜ್ಯಪಾಲರು ಈ ಮನವಿಯನ್ನು ತಿರಸ್ಕರಿಸಿದ್ದರು.

ಇನ್ನೊಂದೆಡೆ ಶಿವಸೇನೆಗೆ ಬೆಂಬಲ ನೀಡುವ ನಿರ್ಧಾರದಿಂದ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಹಿಂದೆ ಸರಿದಿತ್ತು. ಈ ನಿಟ್ಟಿನಲ್ಲಿ ಎನ್ ಸಿಪಿ ಜೊತೆ ಹೆಚ್ಚಿನ ಮಾತುಕತೆಯ ಅವಶ್ಯಕತೆ ಇದೆ ಎಂದಿತ್ತು. ಇದೀಗ ರಾಜ್ಯಪಾಲರು ಎನ್ ಸಿಪಿಗೆ ಸರಕಾರ ರಚನೆಯ ಕರೆ ನೀಡಿದ್ದಾರೆ.

"ಇಂದು 8:30ಕ್ಕೆ ರಾಜ್ಯಪಾಲರು ಕರೆ ಮಾಡಿದ್ದು, ಛಗನ್ ಭುಜಬಲ್, ಜಯಂತ್ ಪಾಟೀಲ್ ಮತ್ತು ಇತರರೊಡನೆ ತನ್ನನ್ನು ಭೇಟಿಯಾಗುವಂತೆ ತಿಳಿಸಿದ್ದಾರೆ. ನಾವು ಅವರನ್ನು ಭೇಟಿಯಾಗುತ್ತೇವೆ. ಅವರು ಯಾಕೆ ಕರೆ ಮಾಡಿದ್ದಾರೆ ಎನ್ನುವ ಬಗ್ಗೆ ನಮಗೆ ತಿಳಿದಿಲ್ಲ" ಎಂದು ಎನ್ ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News