ದೇವದತ್ತ ಶತಕ: ಕರ್ನಾಟಕಕ್ಕೆ ಜಯ

Update: 2019-11-11 19:16 GMT

ವಿಶಾಖಪಟ್ಟಣ, ನ.11:ದೇವದತ್ತ ಪಡಿಕ್ಕಲ್ ಶತಕದ ನೆರವಿನಿಂದ ಕರ್ನಾಟಕ ತಂಡ ಇಲ್ಲಿ ಸೋಮವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಮೆಂಟ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಆಂಧ್ರ ವಿರುದ್ಧ 5 ವಿಕೆಟ್‌ಗಳ ಜಯ ಗಳಿಸಿದೆ.

ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 185 ರನ್‌ಗಳ ಕಠಿಣ ಸವಾಲು ಪಡೆದ ಕರ್ನಾಟಕ ತಂಡ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ 189 ರನ್ ಗಳಿಸಿ ಗೆಲುವು ದಾಖಲಿಸಿಕೊಂಡಿತು. ದೇವದತ್ತ ಪಡಿಕ್ಕಲ್ ಔಟಾಗದೆ 122 ರನ್(60ಎ, 13ಬೌ, 7ಸಿ) ಗಳಿಸಿ ತಂಡದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದರು.

 1.4 ಓವರ್‌ಗಳಲ್ಲಿ 7 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಕರ್ನಾಟಕ ತಂಡ ಪಡಿಕ್ಕಲ್ ಶತಕದ ನೆರವಿನಲ್ಲಿ ಚೇತರಿಸಿಕೊಂಡು ಗೆಲುವಿನ ದಡ ಸೇರಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹನ್ ಕದಮ್ (1) ಮತ್ತು ಲುವಿನೀತ್ ಸಿಸೋಡಿಯಾ (1) ಅವರು ಚೆಪುರಪಳ್ಳಿ ಸ್ಟಿಫೆನ್ ದಾಳಿಗೆ ಸಿಲುಕಿ ಬೇಗನೆ ಪೆವಿಲಿಯನ್‌ಗೆ ವಾಪಸಾದರು. ಬಳಿಕ ಕ್ರೀಸ್‌ಗೆ ಆಗಮಿಸಿದ ದೇವ್‌ದತ್ ಅವರು ಕೃಷ್ಣಪ್ಪ ಗೌತಮ್‌ಗೆ ಜೊತೆಯಾದರು. ಇವರು ಮೂರನೇ ವಿಕೆಟ್‌ಗೆ 63 ರನ್‌ಗಳನ್ನು ಸೇರಿಸಿದರು. ತಂಡದ ಸ್ಕೋರ್ 7 ಓವರ್‌ಗಳಲ್ಲಿ 70ಕ್ಕೆ ಏರಿತು. 8ನೇ ಓವರ್‌ನ ಮೊದಲ ಎಸೆತದಲ್ಲಿ ಗೌತಮ್ ಅವರು ಸಸಿಕಾಂತ್ ಎಸೆತದಲ್ಲಿ ಸ್ಟಿಫೆನ್‌ಗೆ ಕ್ಯಾಚ್ ನೀಡಿದರು. ಕೃಷ್ಣಪ್ಪ ಗೌತಮ್ 35 ರನ್(17ಎ, 5ಬೌ,1ಸಿ) ಗಳಿಸಿದರು. ಕರುಣ್ ನಾಯರ್ 3 ರನ್ ಗಳಿಸಿ ರನೌಟಾದರು. 8.4 ಓವರ್‌ಗಳಲ್ಲಿ 94ಕ್ಕೆ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಕರ್ನಾಟಕವನ್ನು ಶ್ರೇಯಸ್ ಗೋಪಾಲ್ (11) ಮತ್ತು ದೇವದತ್ತ ಪಡಿಕ್ಕಲ್ ಆಧರಿಸಿ 5ನೇ ವಿಕೆಟ್‌ಗೆ 64 ರನ್ ಸೇರಿಸಿದರು. ಆರನೇ ವಿಕೆಟ್‌ಗೆ ಪಡಿಕ್ಕಲ್‌ಗೆ ಪ್ರವೀಣ್ ದುಬೆ ಜೊತೆಯಾದರು. ಇವರು ಮುರಿಯದ ಜೊತೆಯಾಟದಲ್ಲಿ 33 ರನ್ ಸೇರಿಸಿ ತಂಡದ ಗೆಲುವಿಗೆ ನೆರವಾದರು.

ಆಂಧ್ರ 184/5: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಂಧ್ರ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 184 ರನ್ ಗಳಿಸಿತ್ತು.

ಅಶ್ವಿನ್ ಹೆಬ್ಬಾರ್(61), ಪ್ರಶಾಂತ್ ಕುಮಾರ್(79) ಮತ್ತು ನಾಯಕ ರಿಕಿ ಭುಯ್ (21) ಅವರು ಆಂಧ್ರ ತಂಡಕ್ಕೆ ಉತ್ತಮ ಮೊತ್ತ ದಾಖಲಿಸಲು ನೆರವಾದರು. 5 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡರೂ ಆಂಧ್ರ ತಂಡಕ್ಕೆ ಎರಡನೇ ವಿಕೆಟ್‌ಗೆ ಅಶ್ವಿನ್ ಹೆಬ್ಬಾರ್ ಮತ್ತು ಪ್ರಶಾಂತ್ ಕುಮಾರ್ ಜೊತೆಯಾಗಿ 139 ರನ್‌ಗಳ ಜೊತೆಯಾಟ ನೀಡಿದರು. ಹೆಬ್ಬಾರ್ 61 ರನ್(44ಎ, 7ಬೌ,1ಸಿ) ಗಳಿಸಿದರು. ಆಂಧ್ರ 14.4 ಓವರ್‌ಗಳಲ್ಲಿ 144ಕ್ಕೆ 2ನೇ ವಿಕೆಟ್‌ನ್ನು ಕಳೆದುಕೊಂಡಿತು. ಮತ್ತೆ ತಂಡದ ಖಾತೆಗೆ 10 ರನ್ ಸೇರುವಷ್ಟರಲ್ಲಿ ಇನ್ನೊಂದು ವಿಕೆಟ್‌ನ್ನು ಆಂಧ್ರ ಕೈ ಚೆಲ್ಲಿತು. ಪ್ರಶಾಂತ್ ಕುಮಾರ್ 79 ರನ್(51ಎ, 3ಬೌ, 6ಸಿ) ಸೇರಿಸಿದರು. ನಾಯಕ ರಿಕಿ ಭುವಿ 21 ರನ್ ಮತ್ತು ವಿಕೆಟ್ ಕೀಪರ್ ಶ್ರೀಕರ್ ಭರತ್ 5 ರನ್ ಗಳಿಸಿದರು. ನರೆನ್ ರೆಡ್ಡಿ ಔಟಾಗದೆ 6 ರನ್ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News