‘ಚಿಲ್ಲರೆ’ ವಂಚಕರು..!!

Update: 2019-11-12 18:11 GMT

ಮಾನ್ಯರೇ,

ಬಸ್ಸುಗಳಲ್ಲಿ ಪ್ರಯಾಣಿಸುವ ಸಂದರ್ಭಗಳಲ್ಲಿ ಪ್ರಯಾಣಿಕರು ಟಿಕೆಟು ದರದ ಸರಿಯಾದ ಹಣವನ್ನು ಹೊಂದಿಸಿ ನೀಡಲು ಅಸಾಧ್ಯವಾದ ಸಮಯದಲ್ಲಿ ಟೀಕೆಟು ಹಣಕ್ಕಿಂತ ಹೆಚ್ಚಿಗೆ ಹಣವನ್ನು ನಿರ್ವಾಹಕರಿಗೆ ನೀಡುವ ಸಂದರ್ಭಗಳು ತುಂಬಾ ನಡೆಯುತ್ತವೆ. ಉಳಿದ ಚಿಲ್ಲರೆ ಹಣ ನಿರ್ವಾಹಕನು ಪ್ರಯಾಣಿಕನಿಗೆ ಮರು ಪಾವತಿಸುವ ಪ್ರಕ್ರಿಯೆಗಳು ನಂತರ ನಡೆಯುತ್ತವೆ. ಕೆಲವು ಸಂದರ್ಭಗಳಲ್ಲಿ ಚಿಲ್ಲರೆ ಇಲ್ಲದೆ ಹಣ ಮತ್ತೆ ಕೊಡುತ್ತೇನೆ ಎಂದು ಹೇಳಿ ನಿರ್ವಾಹಕರು ಮುಂದೆ ಸಾಗುತ್ತಾರೆ. ಹೀಗೆ ಟಿಕೆಟು ದರಕ್ಕಿಂತ ಹೆಚ್ಚಿಗೆ ಹಣ ನೀಡಿದ ಎಲ್ಲಾ ಪ್ರಯಾಣಿಕರಿಗೂ ಇದೇ ಮಾತನ್ನು ಹೇಳುವುದು ಕಂಡುಬರುತ್ತದೆ. ಕೆಲವು ಸಂದರ್ಭಗಳಲ್ಲಿ ಪ್ರಯಾಣಿಕರು 10, 20 ರೂಪಾಯಿಗಳ ಪ್ರಯಾಣ ದರಕ್ಕೆ 100, 200 ರೂಪಾಯಿಗಳ ನೋಟುಗಳು ನೀಡುವ ಸಂದರ್ಭಗಳು ಇರುತ್ತವೆ. ಆಗ ನಿರ್ವಾಹಕರು ಅನಿವಾರ್ಯವಾಗಿ ತಮ್ಮಲ್ಲಿ ಚಿಲ್ಲರೆ ಅಭಾವದಿಂದ ಮತ್ತೆ ನೀಡುತ್ತೇವೆಂದು ಹೇಳುವುದು ಕಾರಣ ಆಗಿರುತ್ತದೆ. ಕೆಲವು ನಿರ್ವಾಹಕರು ನೆನಪಿನಿಂದ ಉಳಿದ ಚಿಲ್ಲರೆ ಹಣವನ್ನು ಪ್ರಮಾಣಿಕವಾಗಿ ಪ್ರಯಾಣಿಕರಿಗೆ ಹಿಂದಿರುಗಿಸುತ್ತಾರೆ.

ಕೆಲವು ನಿರ್ವಾಹಕರು ಹಾಗಲ್ಲ, ತಮ್ಮಲ್ಲಿ ಚಿಲ್ಲರೆ ಹಣ ಬೇಕಾದಷ್ಟು ಇದ್ದರೂ ಬೇಕಂತಲೇ ಮತ್ತೆ ಕೊಡುತ್ತೇನೆಂದು ಪ್ರಯಾಣಿಕರಿಗೆ ಹೇಳುತ್ತಾರೆ. ನಿರ್ವಾಹಕರು ಬಸ್ಸಿನಲ್ಲಿ ಅತ್ತ ಇತ್ತ ಸಾಗುವಾಗಲೇ ಅವರ ಜೇಬಿನಲ್ಲಿರುವ ಚಿಲ್ಲರೆ ನಾಣ್ಯಗಳು ಗೆಜ್ಜೆ ಸದ್ದಿನಂತೆ ಝಣ ಝಣ ಶಬ್ದ ಮಾಡುತ್ತಿರುತ್ತವೆ. ಪ್ರಯಾಣಿಕರ ನಿಲುಗಡೆ ಸ್ಥಳ ಬಂದರೂ ಇವರು ಚಿಲ್ಲರೆ ಹಣವನ್ನು ಹಿಂದಿರುಗಿಸುವುದಿಲ್ಲ, ನೆನಪಿದ್ದರೂ ನೆನಪಿಲ್ಲದಂತೆ ನಟಿಸುತ್ತಾರೆ. ಕೆಲವೊಮ್ಮೆ ಪ್ರಯಾಣಿಕನು, ಬಾಕಿ ಇರುವ 2, 5 ರೂಪಾಯಿ ಚಿಲ್ಲರೆ ಹಣಕ್ಕಾಗಿ ಏನು ಕೇಳುವುದೆಂದು ಮುಜುಗರದಿಂದ ಸುಮ್ಮನಾಗುವುದೂ ಉಂಟು. ಮತ್ತೆ ಕೆಲವು ಪ್ರಯಾಣಿಕರಿಗೆ ಉಳಿದ ಚಿಲ್ಲರೆ ಕೇಳಲು ನೆನಪೇ ಇರುವುದಿಲ್ಲ. ಬಸ್ಸು ದಿನದ ಸಂಚಾರ ಸೇವೆಯನ್ನು ಮುಕ್ತಾಯಗೊಳಿಸಿದಾಗ, ‘ಹನಿ ಹನಿ ಸೇರಿ ಹಳ್ಳವಾದಂತೆ’.. ನಿರ್ವಾಹಕನ ಜೇಬಿನಲ್ಲಿ ದೊಡ್ಡ ಮೊತ್ತದ ಹಣವು ಸಂಗ್ರಹ ಆಗುತ್ತದೆ. ಇದು ಇವರ ನಿತ್ಯದ ದಿನಚರಿಯು ಆಗಿರುತ್ತದೆ. ಈ ತರದ ಚಿಲ್ಲರೆ ದರೋಡೆಯು ಖಾಸಗಿ ಹಾಗೂ ಸರಕಾರಿ ಬಸ್ಸುಗಳಲ್ಲಿ ಕೆಲವೊಂದು ನಿರ್ವಾಹಕರಿಂದ ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಬಹಳವಾಗಿ ಕೇಳಿ ಬರುತ್ತಿವೆ. ಈ ರೀತಿಯ ವಿಭಿನ್ನ ವಂಚನೆಯಿಂದ ಪ್ರಯಾಣಿಕರ ಲಕ್ಷಾಂತರ ಹಣವು ನಿಧಾನ ಗತಿಯಲ್ಲಿ ದೋಚಲಾಗುತ್ತಿದೆ. ಈ ಬಗ್ಗೆ ಸಾರಿಗೆ ಇಲಾಖೆ ಮತ್ತು ಬಸ್ಸು ಮಾಲಕರ ಸಂಘಗಳು ಅಗತ್ಯವಾಗಿ ಗಮನಿಸ ಬೇಕಾಗಿದೆ.

Writer - -ತಾರಾನಾಥ್ ಮೇಸ್ತ, ಶಿರೂರು

contributor

Editor - -ತಾರಾನಾಥ್ ಮೇಸ್ತ, ಶಿರೂರು

contributor

Similar News