ಬಿಜೆಪಿಯ ರಾಷ್ಟ್ರೀಯವಾದ ಮತ್ತು ಚುನಾವಣಾ ಚದುರಂಗ

Update: 2019-11-12 18:14 GMT

ಬಿಜೆಪಿ ಇತರ ಪಕ್ಷಗಳಿಗಿಂತ ಹಲವು ರೀತಿಗಳಲ್ಲಿ ಭಿನ್ನವಾದ ಒಂದು ಪಕ್ಷ. ಅದು ಭಾರತದ ಸಂವಿಧಾನದ ಮೂಲ ಆಶಯಗಳಾದ ಜಾತ್ಯತೀತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವ್ಯತಿರಿಕ್ತವಾಗಿ ಭಾರತ ಒಂದು ಹಿಂದೂ ರಾಷ್ಟ್ರ ಎನ್ನುವ ಒಂದು ಪಕ್ಷ. ಆರೆಸ್ಸೆಸ್‌ನ ಚುನಾವಣಾ ಘಟಕವಾಗಿರುವ ಏಕೈಕ ಪಕ್ಷ ಅದು. 2014ರಲ್ಲಿ ಮತ್ತು 2019ರಲ್ಲಿ ಚುನಾವಣೆಯಲ್ಲಿ ಭಾರೀ ಬಹುಮತ ಗಳಿಸಿದ ಪರಿಣಾಮವಾಗಿ ಅದು ಅಭೇಧ್ಯ ಎಂಬ ಭಾವನೆ ಉಂಟಾಯಿತು. ಅದರ ಅಧ್ಯಕ್ಷ ಅಮಿತ್ ಶಾ ‘‘ಬಿಜೆಪಿ ಮುಂದಿನ ಐವತ್ತು ವರ್ಷಗಳ ಕಾಲ ದೇಶವನ್ನಾಳುತ್ತದೆ’’ ಎಂದು ಘೋಷಿಸಿದರು. ಹಾಗಾಗಿ ಅದು ಮಾಧ್ಯಮಗಳ ಬೆಂಬಲದೊಂದಿಗೆ ಮಹಾರಾಷ್ಟ್ರ ಹಾಗೂ ಹರ್ಯಾಣ ಅಸೆಂಬ್ಲಿ ಚುನಾವಣೆಗಳಲ್ಲಿ ಸುಲಭವಾಗಿ ಬಹುಮತ ಪಡೆಯುತ್ತದೆ ಎಂದು ತಿಳಿಯಲಾಯಿತು. ಆದರೆ ಈಗ ಅದು ಮರು ಚಿಂತನೆ ನಡೆಸುವಂತಾಗಿದೆ.

ಹಯಾರ್ಣದಲ್ಲಿ ಅದಕ್ಕೆ ಸರಳ ಬಹುಮತ ದೊರಕದೆ ಅದು ಜೆಜೆಪಿಯ ದುಶ್ಯಂತ್ ಚೌತಾಲಾ ಜೊತೆ ಮೈತ್ರಿ ಮಾಡಿಕೊಳ್ಳಬೇಕಾಯಿತು. ಮಹಾರಾಷ್ಟ್ರದಲ್ಲಿ ಅದು ಅತ್ಯಂತ ಹೆಚ್ಚು ಸ್ಥಾನ ಗಳಿಸಿದ ಏಕೈಕ ಪಕ್ಷವಾಗಿದ್ದರೂ ಅದಕ್ಕೆ ಸರಳ ಬಹುಮತ ದೊರಕಲಿಲ್ಲ. ಇದು ಬಿಜೆಪಿಯ ನೈತಿಕ ಸೋಲು ಎಂದು ಕೆಲವರು ವೀಕ್ಷಕರು ಹೇಳಿದ್ದಾರೆ.

ಹಿಂದುತ್ವ ಕಾರ್ಯಸೂಚಿ ಹೊಂದಿರುವ ಬಿಜೆಪಿಯ ಇದುವರೆಗಿನ ಬಹಳ ದೊಡ್ಡ ಶಕ್ತಿಯೆಂದರೆ ಅದಕ್ಕೆ ಇರುವ ಆರೆಸ್ಸೆಸ್ ಸ್ವಯಂಸೇವಕರ ಭಾರೀ ಬೆಂಬಲ. ಗುಜರಾತ್ ಹತ್ಯಾಕಾಂಡದ ಬಳಿಕ ಅದಕ್ಕೆ ದೊರಕಿದ ಮತ್ತೊಂದು ಬೆಂಬಲವೆಂದರೆ ಕಾರ್ಪೊರೇಟ್ ರಂಗದ ಬೆಂಬಲ. ‘ವಿಕಾಸ’ದ ಹೆಸರಿನಲ್ಲಿ ಮೋದಿಯವರು ಈ ರಂಗಕ್ಕೆ ಎಲ್ಲ ಸವಲತ್ತುಗಳನ್ನು ನೀಡಿದರು. ಈ ರಂಗವು ಮಾಧ್ಯಮಗಳ ಮೇಲೆ ಕೂಡ ಬಹಳ ದೊಡ್ಡ ಹಿಡಿತ ಸಾಧಿಸಿತು. ಬಿಜೆಪಿಯ ಶಕ್ತಿಯನ್ನು ಹೆಚ್ಚಿಸಿದ ಇನ್ನೊಂದು ಅಂಶವೆಂದರೆ ಜನಲೋಕಪಾಲ್ ಮಸೂದೆ. ಅಣ್ಣಾ ಹಝಾರೆಯವರನ್ನು ಮುಂದಿಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಇರುವ ಭಾವನೆಗಳನ್ನು ಬಳಸಿ ಅದು ತನ್ನ ಚುನಾವಣಾ ದೃಷ್ಟಿಯಿಂದ ಕಾಂಗ್ರೆಸ್‌ನ ಪ್ರತಿಷ್ಠೆಯನ್ನು ಸಂಪೂರ್ಣವಾಗಿ ಹದಗೆಡುವುದರಲ್ಲಿ ಯಶಸ್ವಿಯಾಯಿತು. ಕಾಂಗ್ರೆಸ್‌ನ ಪ್ರತಿಷ್ಠೆಗೆ ಮಸಿ ಬಳಿಯುವಲ್ಲಿ ಅದು ನಿರ್ಭಯಾ ಪ್ರಕರಣವನ್ನು ಚೆನ್ನಾಗಿ ಬಳಸಿಕೊಂಡ ಪರಿಣಾಮವಾಗಿ ಅದಕ್ಕೆ ಬಹಳಷ್ಟು ಚುನಾವಣಾ ಲಾಭವಾಯಿತು. ಅದೇ ವೇಳೆ ಬಿಜೆಪಿ ತನ್ನ ಚುನಾವಣಾ ಯಂತ್ರವನ್ನು ಸಂಪೂರ್ಣ ಪರಿಪೂರ್ಣಗೊಳಿಸಿತು; ಅದೀಗ ವಿಶ್ವದಲ್ಲಿ ತಾನು ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತಿದೆ.

ಮೋದಿಯವರು ನೀಡಿದ ಬ್ಯಾಂಕ್ ಖಾತೆಗೆ ರೂಪಾಯಿ ಹದಿನೈದು ಲಕ್ಷ ಜಮೆ, ಒಂದು ಕೋಟಿ ನೌಕರಿ ಸೃಷ್ಟಿ, ಬೆಲೆಗಳ ಇಳಿಕೆ ಇತ್ಯಾದಿತ್ಯಾದಿ ಆಶ್ವಾಸನೆಗಳನ್ನು ಪ್ರಚಾರ ಮಾಡಲಾಯಿತು ಮತ್ತು ಮೋದಿಯವರು ಶೇ.31 ಮತಗಳಿಕೆಯೊಂದಿಗೆ 2014ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ನಂತರದ ವರ್ಷಗಳಲ್ಲಿ ಈ ಆಶ್ವಾಸನೆಗಳನ್ನು ಈಡೇರಿಸುವ ಯಾವ ಪ್ರಯತ್ನಗಳನ್ನೂ ಬಿಜೆಪಿ ಮಾಡಲಿಲ್ಲ. ಅದು ಗೋಮಾಂಸ ವಿವಾದದ ಮೂಲಕ ಧ್ರುವೀಕರಣಕ್ಕೆ ಕಿಡಿ ಹಚ್ಚುತ್ತಾ ಹೋಯಿತು. ಲವ್ ಜಿಹಾದ್, ಘರ್ ವಾಪಸಿಯಂತಹ ಪೂರಕ ವಿಷಯಗಳು ಬಿಜೆಪಿಯ ಚುನಾವಣಾ ಸಾಮರ್ಥ್ಯವನ್ನು ಬಲಪಡಿಸುತ್ತಾ ಹೋಯಿತು. ಧಾರ್ಮಿಕ ಅಲ್ಪಸಂಖ್ಯಾತರು ಬಹುಸಂಖ್ಯಾತ ಹಿಂದೂಗಳಿಗೆ ಒಂದು ಬೆದರಿಕೆ ಎಂದು ಬಿಂಬಿಸುವುದರಲ್ಲಿ ಅದು ಯಶಸ್ವಿಯಾಯಿತು. ಭಾವನಾತ್ಮಕ ವಿಷಯಗಳ ಸಾಲಿಗೆ ಅದು ರಾಷ್ಟ್ರೀಯವಾದದ ತನ್ನ ಪರಿಕಲ್ಪನೆಯನ್ನು ಸೇರಿಸಿತು. ಬಿಜೆಪಿಯ ರಾಷ್ಟ್ರೀಯವಾದವೆಂದರೆ ಪಾಕಿಸ್ತಾನದ ವಿರುದ್ಧ ಸಮೂಹ ಸನ್ನಿಯನ್ನು ಸೃಷ್ಟಿಸುವುದು. ಅದರ ಈ ರಾಷ್ಟ್ರೀಯ ವಾದಕ್ಕೆ ಸಮಾಜದ ಕೆಲ ವರ್ಗಗಳ ಸಹಮತ ದೊರಕಿ ಅದಕ್ಕೆ ಚುನಾವಣಾ ಲಾಭವಾಯಿತು. ಪರಿಣಾಮವಾಗಿ 2019ರ ಚುನಾವಣೆಗಳಲ್ಲಿ ಈ ಎಲ್ಲ ವಿಷಯಗಳು, ವಿವಾದಗಳು ತಮ್ಮ ತಮ್ಮ ಪಾತ್ರ ವಹಿಸಿದವು. ಅಲ್ಲದೆ ಪುಲ್ವಾಮ-ಬಾಲಕೋಟ್ ಮತ್ತು ಚುನಾವಣಾ ಮತಯಂತ್ರಗಳು ಬಿಜೆಪಿಯ ಗೆಲುವಿಗೆ ತಮ್ಮ ಕೊಡುಗೆಯನ್ನು ನೀಡಿದವು.

ಹಾಗಾದರೆ ಮಹಾರಾಷ್ಟ್ರ, ಹರ್ಯಾಣ ಚುನಾವಣೆಗಳಲ್ಲಿ ಮೋದಿ-ಶಾ ಜೋಡಿಗೆ ಯಾಕೆ ನಿರೀಕ್ಷಿತ ಗೆಲುವು ಸಿಗಲಿಲ್ಲ? ಜನರು ಭಾವನೆಗಳನ್ನು ಹಾಗೂ ರಾಷ್ಟ್ರೀಯವಾದವನ್ನು ತಿನ್ನುತ್ತಾ ಬದುಕಲು ಸಾಧ್ಯವೇ? ಹೊಟ್ಟೆಪಾಡಿನ ಮೂಲಭೂತ ಅವಶ್ಯಕತೆಗಳ ಪ್ರಶ್ನೆಗಳು ಈಗ ಮೇಲಕ್ಕೆ ಬರುತ್ತಿವೆ. ರಾಷ್ಟ್ರೀಯವಾದ ಅಥವಾ ಕೋಮುವಾದದ ಸುತ್ತ ಸೃಷ್ಟಿಸಲಾಗುವ ಸಮೂಹ ಸನ್ನಿಯಿಂದ ಈ ಪ್ರಶ್ನೆಗಳನ್ನು ಬದಿಗೆ ತಳ್ಳಲು ಸಾಧ್ಯವಿಲ್ಲ. ಸಮಾಜದ ಮೂಲಭೂತವಾದ ಅವಶ್ಯಕತೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅತ್ಯಂತ ಬಲಿಷ್ಠವಾದ ಚುನಾವಣಾ ಯಂತ್ರ ಕೂಡ ತುಳಿದು ಹಾಕಲಾರದು ಎಂಬುದು ಮಹಾರಾಷ್ಟ್ರ, ಹರ್ಯಾಣ ಚುನಾವಣೆಗಳಿಂದ ಕಲಿಯಬೇಕಾದ ಅತ್ಯಂತ ದೊಡ್ಡ ಪಾಠ. 370ನೇ ವಿಧಿಯನ್ನು ರದ್ದುಗೊಳಿಸಿದ್ದೇವೆಂಬ ಜಂಭದಿಂದ ಅಥವಾ ತ್ರಿವಳಿ ತಲಾಖ್ ಪ್ರಶ್ನೆಯಿಂದ, ಪಾಕಿಸ್ತಾನದ ಬಗ್ಗೆ ಭಯ ಸೃಷ್ಟಿಸುವುದರಿಂದ ಹಸಿವನ್ನು ನಿಲ್ಲಿಸಲಾಗುವುದಿಲ್ಲ ಎಂಬುದೇ ಈ ಪಾಠ.

ಖಂಡಿತವಾಗಿಯೂ ಮಹಾರಾಷ್ಟ್ರ, ಹರ್ಯಾಣ ಚುನಾವಣಾ ಫಲಿತಾಂಶಗಳು ಜಾತ್ಯತೀತ ಮೌಲ್ಯಗಳನ್ನು ಹಾಗೂ ಆಹಾರ, ನೌಕರಿ, ಆರೋಗ್ಯ ಮತ್ತು ಬದುಕುವ ಹಕ್ಕಿನ ಕುರಿತು ಮಾತಾಡುವ ಕಾರ್ಯಸೂಚಿಯನ್ನು ಬಲಪಡಿಸುತ್ತವೆ. ಜನರ ಸಮಸ್ಯೆಗಳಿಗೆ ಬದ್ಧತೆ ತೋರುವ ವಿಪಕ್ಷಗಳು ಈಗಲಾದರೂ ಒಂದಾಗಿ ನಿಂತು ಸಂವಿಧಾನದ ಪಟ್ಟಿಯ ಮೇಲೆ ರಾಷ್ಟ್ರೀಯ ಅಜೆಂಡಾವನ್ನು ತಂದು ನಿಲ್ಲಿಸಲು ಸಿದ್ಧವಾದಾವೇ? ಕೋಮು ಹಾಗೂ ರಾಷ್ಟ್ರೀಯವಾದಿ ಅಜೆಂಡಾದ ಮಿತಿಗಳು ಈಗ ಬದಲಾಗಿದೆ. ಈಗ ಚೆಂಡು ಬಹುತ್ವದಲ್ಲಿ ವಿವಿಧತೆ ಹಾಗೂ ಮಾನವತಾ ವಾದದಲ್ಲಿ ನಂಬಿಕೆ ಇರುವವರ ಅಂಗಳದಲ್ಲಿದೆ. ಸಮಾಜವನ್ನಾವರಿಸಿರುವ ದ್ವೇಷ ಮತ್ತು ವಿಭಾಜಕ ಶಕ್ತಿಗಳನ್ನು ಅವರು ಎದುರಿಸಿ ನಿಲ್ಲಬೇಕಾಗಿದೆ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News