ಮನೀಷ್ ಮಿಂಚಿನ ಶತಕ: ಕರ್ನಾಟಕಕ್ಕೆ 80 ರನ್‌ಗಳ ಜಯ

Update: 2019-11-13 05:30 GMT

ವಿಜಯನಗರ, ನ.12: ನಾಯಕ ಮನೀಷ್ ಪಾಂಡೆ ಶರವೇಗದ ಶತಕ ಮತ್ತು ದೇವದತ್ತ ಪಡಿಕ್ಕಲ್ ಅರ್ಧಶತಕದ ನೆರವಿನಲ್ಲಿ ಕರ್ನಾಟಕ ತಂಡ ಇಲ್ಲಿ ಮಂಗಳವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ‘ಎ’ ಗುಂಪಿನ 4ನೇ ಪಂದ್ಯದಲ್ಲಿ ಸರ್ವಿಸಸ್ ತಂಡದ ವಿರುದ್ಧ 80 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

 ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕರ್ನಾಟಕ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟದಲ್ಲಿ 250 ರನ್ ಗಳಿಸುವ ಮೂಲಕ ಸರ್ವಿಸಸ್‌ತಂಡಕ್ಕೆೆ ಕಠಿಣ ಸವಾಲು ವಿಧಿಸಿತ್ತು.

 ಕರ್ನಾಟಕ ತಂಡ ಮೊದಲ ಓವರ್‌ನ 5ನೇ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ರೋಹನ್ ಕದಮ್(4) ವಿಕೆಟ್ ಕಳೆದುಕೊಂಡಿತು. ಆಗ ಎರಡನೇ ವಿಕೆಟ್‌ಗೆ ದೇವದತ್ತ ಪಡಿಕ್ಕಲ್‌ಗೆ ನಾಯಕ ಮನೀಷ್ ಪಾಂಡೆ ಜೊತೆಯಾದರು. ಇವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 167 ರನ್ ಸೇರಿಸಿದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಪಡಿಕ್ಕಲ್ ವೇಗವಾಗಿ 75 ರನ್(43ಎ, 8ಬೌ,4ಸಿ) ಗಳಿಸಿ ವಿಕಾಸ್ ಯಾದವ್ ಎಸೆತದಲ್ಲಿ ನಕುಲ್ ಶರ್ಮಾಗೆ ಕ್ಯಾಚ್ ನೀಡಿದರು.

ಮೂರನೇ ವಿಕೆಟ್‌ಗೆ ಪಾಂಡೆ ಮತ್ತು ಗೌತಮ್ 57 ರನ್ ಸೇರಿಸಿದರು. ಗೌತಮ್ 23 ರನ್ ಗಳಿಸಿ ನಿರ್ಗಮಿಸಿದರು. ಅಂತಿಮ 5 ಎಸೆತಗಳಲ್ಲಿ ಪಾಂಡೆ ಮತ್ತು ಪ್ರವೀಣ್ ದುಬೆ 21 ರನ್ ಸೇರಿಸಿದರು. ನಾಯಕ ಪಾಂಡೆ ಔಟಾಗದೆ 129 ರನ್(54ಎ, 12 ಬೌಂಡರಿ, 10 ಸಿಕ್ಸರ್) ಮತ್ತು ದುಬೆ ಔಟಾಗದೆ 9 ರನ್(3ಎ, 1ಸಿ) ಗಳಿಸಿದರು.

ಸರ್ವಿಸಸ್ 170/7: ಸರ್ವಿಸಸ್‌ಗೆ ಸವಾಲು ಕಠಿಣವಾಗಿತ್ತು. ಗೆಲುವಿಗೆ 251 ರನ್ ಗಳಿಸಬೇಕಿದ್ದ ಸರ್ವಿಸಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟದಲ್ಲಿ 170 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಶ್ರೇಯಸ್ ಗೋಪಾಲ್(5-19) ಸ್ಪಿನ್ ಮೋಡಿಗೆ ಸಿಲುಕಿದ ಸರ್ವಿಸಸ್ 80 ರನ್‌ಗಳ ಸೋಲು ಅನುಭವಿಸಿತು.

ರವಿ ಚೌಹಾಣ್ 54 ರನ್, ಅಂಶುಲ್ ಗುಪ್ತಾ 29 ರನ್, ನಾಯಕ ರಜತ್ ಪಾಲಿವಾಲ್ ಔಟಾಗದೆ 42 ರನ್, ವಿಕಾಸ್ ಹಥ್ವಾಲಾ 11 ರನ್ ಮತ್ತು ಪುಕಿಟ್ ನಾರಂಗ್ ಔಟಾಗದೆ 15 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News