ಮುಂದಿನ ಗಣರಾಜ್ಯೋತ್ಸವಕ್ಕೆ ಈ ದೇಶದ ಅಧ್ಯಕ್ಷ ಮುಖ್ಯ ಅತಿಥಿ..

Update: 2019-11-14 04:31 GMT

ಬ್ರಸೀಲಿಯಾ, ನ.14: ಭಾರತದ ಮುಂದಿನ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಆಹ್ವಾನವನ್ನು ಬ್ರೆಝಿಲ್ ಅಧ್ಯಕ್ಷ ಒಪ್ಪಿಕೊಂಡಿದ್ದಾರೆ.

ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ ಮತ್ತು ವಿಶ್ವದ ಐದು ಪ್ರಮುಖ ಆರ್ಥಿಕತೆಗಳ ಜತೆ ಭಾರತದ ಸಂಬಂಧ ಬಲಪಡಿಸುವ ಉದ್ದೇಶದ 11ನೇ ಬ್ರಿಕ್ಸ್ ಶೃಂಗಸಭೆಗಾಗಿ ಬ್ರೆಝಿಲ್‌ಗೆ ಆಗಮಿಸಿದ್ದ ಪ್ರಧಾನಿ ಮೋದಿ, ಬೊಲ್ಸೊನಾರೊ ಅವರನ್ನು ಭೇಟಿ ಮಾಡಿ ಈ ಆಹ್ವಾನ ನಿಡಿದರು. ಜತೆಗೆ ಉಭಯ ದೇಶಗಳ ಜನತೆಯ ಲಾಭಕ್ಕಾಗಿ ಪರಸ್ಪರ ಸಹಕಾರ ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆಸಿದರು.

ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಸಂಬಂಧ ಉಭಯ ನಾಯಕರು ಫಲಪ್ರದ ಮಾತುಕತೆ ನಡೆಸಿದರು ಎಂದು ಉನ್ನತ ಮೂಲಗಳು ಹೇಳಿವೆ. 2020ರ ಗಣರಾಜ್ಯೋತ್ಸವಕ್ಕೆ ಮೋದಿ ನೀಡಿದ ಆಹ್ವಾನವನ್ನು ಬೊಲ್ಸೊನಾರೊ ಸಂತೋಷದಿಂದ ಸ್ವೀಕರಿಸಿದರು ಎಂದು ಅಧಿಕೃತ ಪ್ರಕಟನೆ ಹೇಳಿದೆ.

ವ್ಯಾಪಾರಕ್ಕೆ ಸಂಬಂಧಿಸಿದಂತೆ ಬ್ರೆಝಿಲ್ ಜತೆ ಚರ್ಚೆ ನಡೆಸಲಾಗುತ್ತಿದೆ. ಕೃಷಿಸಾಧನಗಳು, ಪಶುಪಾಲನೆ, ಕೊಯ್ಲೋತ್ತರ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಬ್ರೆಝಿಲ್, ಭಾರತದಲ್ಲಿ ಮಾಡಬಹುದಾದ ಹೂಡಿಕೆ ಅವಕಾಶಗಳ ಬಗ್ಗೆಯೂ ಚರ್ಚಿಸಿದರು ಎಂದು ಪ್ರಕಟನೆ ತಿಳಿಸಿದೆ. ಭಾರತ ಭೇಟಿ ವೇಳೆ ದೊಡ್ಡ ವ್ಯಾಪರ ನಿಯೋಗವನ್ನೂ ಜತೆಗೆ ಕರೆ ತರುವುದಾಗಿ ಬ್ರೆಝಿಲ್ ಅಧ್ಯಕ್ಷರು ಭರವಸೆ ನೀಡಿದ್ದಾರೆ. ಬಾಹ್ಯಾಕಾಶ ಮತ್ತು ರಕ್ಷಣಾ ವಲಯದಲ್ಲೂ ಪರಸ್ಪರ ಸಹಕಾರಕ್ಕೆ ಉಭಯ ಗಣ್ಯರು ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News