ಕೌಟುಂಬಿಕ ಹಿಂಸೆ: ಫಲ ನೀಡಿದ ಟ್ವಿಟರ್ ದೂರು

Update: 2019-11-14 16:41 GMT
ಫೋಟೋ: worldpulse.com

ಶಾರ್ಜಾ (ಯುಎಇ), ನ. 14: ತನ್ನ ಗಂಡ ತನಗೆ ಹಿಂಸೆ ನೀಡುತ್ತಿದ್ದಾನೆ ಎಂಬುದಾಗಿ ಭಾರತೀಯ ವಲಸಿಗ ಮಹಿಳೆಯೊಬ್ಬರು ಹೇಳುವ ವೀಡಿಯೊವೊಂದು ಟ್ವಿಟರ್‌ನಲ್ಲಿ ಬಂದ ಬಳಿಕ, ಅವರ ಗಂಡನನ್ನು ಶಾರ್ಜಾ ಪೊಲೀಸರು ಬಂಧಿಸಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಟ್ವೀಟ್‌ಗೆ ತಕ್ಷಣ ಪ್ರತಿಕ್ರಿಯಿಸಿದ ಶಾರ್ಜಾ ಪೊಲೀಸರು ಮಹಿಳೆಯನ್ನು ಸಂಪರ್ಕಿಸಿದರು ಹಾಗೂ ಬುಧವಾರ ರಾತ್ರಿ 47 ವರ್ಷದ ಭಾರತೀಯನನ್ನು ಬಂಧಿಸಿದರು.

ನವೆಂಬರ್ 12ರಂದು ಟ್ವಿಟರ್‌ನಲ್ಲಿ ಹಾಕಲಾದ ವೀಡಿಯೊ, 33 ವರ್ಷದ ಜಾಸ್ಮಿನ್ ಸುಲ್ತಾನ್ ಒಂದು ಕಣ್ಣಿನಲ್ಲಿ ರಕ್ತ ಸುರಿಸುತ್ತಾ ಅಳುವುದನ್ನು ತೋರಿಸುತ್ತದೆ.

‘‘ನನಗೆ ತುರ್ತು ಸಹಾಯ ಬೇಕು. ನನ್ನ ಹೆಸರು ಜಾಸ್ಮಿನ್ ಸುಲ್ತಾನ್. ನಾನು ಯುಎಇಯ ಶಾರ್ಜಾದಲ್ಲಿ ವಾಸಿಸುತ್ತಿದ್ದೇನೆ. ನನ್ನ ಗಂಡನ ಹೆಸರು ಮುಹಮ್ಮದ್ ಖೈಝರ್ ಉಲ್ಲಾ. ನನ್ನ ಗಂಡ ನನ್ನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ನನಗೆ ಸಹಾಯ ಬೇಕು’’ ಎಂಬುದಾಗಿ ಬೆಂಗಳೂರಿನ ಮಹಿಳೆ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ತನ್ನ ಗಂಡ ಯಾವಾಗಲೂ ತನ್ನ ಮೇಲೆ ಹಲ್ಲೆ ನಡೆಸುತ್ತಾನೆ ಎಂದು ಅವರು ಹೇಳಿದ್ದಾರೆ. ದಂಪತಿಗೆ 7 ವರ್ಷಗಳ ಹಿಂದೆ ಮದುವೆಯಾಗಿದೆ ಹಾಗೂ 5 ವರ್ಷ ಮತ್ತು 17 ತಿಂಗಳುಗಳ ಇಬ್ಬರು ಗಂಡು ಮಕ್ಕಳಿದ್ದಾರೆ.

ನನ್ನ ಮತ್ತು ಮಕ್ಕಳ ಪಾಸ್‌ಪೋರ್ಟ್‌ಗಳು ಮತ್ತು ಚಿನ್ನಾಭರಣಗಳನ್ನು ಗಂಡ ಕಸಿದುಕೊಂಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

‘‘ನನ್ನ ಊರಾದ ಬೆಂಗಳೂರಿಗೆ ಮರಳಲು ನನಗೆ ಅಧಿಕಾರಿಗಳ ನೆರವು ಬೇಕು. ನನಗೆ ಇಲ್ಲಿ ಯಾರೂ ಸಂಬಂಧಿಕರಿಲ್ಲ ಹಾಗೂ ಮಕ್ಕಳನ್ನು ಸಾಕಲು ಹಣವಿಲ್ಲ’’ ಎಂದು ಅವರು ಹೇಳಿದ್ದಾರೆ.

ಇಂಥ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಾಕಬಾರದು: ಶಾರ್ಜಾ ಪೊಲೀಸ್ ಮನವಿ

ಸಕ್ಷಮ ಪ್ರಾಧಿಕಾರಗಳು ಈ ಪ್ರಕರಣವನ್ನು ನಿಭಾಯಿಸುತ್ತಿವೆ ಎಂದು ಶಾರ್ಜಾ ಪೊಲೀಸರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಿದ್ದಾರೆ.

ಇಂಥ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಬಾರದು, ಅದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಜನರನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News