ಚಿನ್ಮಯಾನಂದ ಮನವಿಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ

Update: 2019-11-16 06:24 GMT

ಹೊಸದಿಲ್ಲಿ, ನ.16: ಲೈಂಗಿಕ ಕಿರುಕುಳ  ಹಾಗೂ ಅತ್ಯಾಚಾರ ಆರೋಪ ಹೊರಿಸಿದ್ದ ಶಹಜಹಾನ್ಪುರ ಕಾನೂನು ವಿದ್ಯಾರ್ಥಿನಿಯು ದಾಖಲಿಸಿದ್ದ ಹೇಳಿಕೆಯ ಪ್ರಮಾಣೀಕೃತ ನಕಲನ್ನು ಬಳಸಲು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದಗೆ ಅವಕಾಶ ನೀಡಿ ಆದೇಶಿಸಿದ್ದ ಅಲಹಾಬಾದ್ ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಂಕೋರ್ಟ್ ಶನಿವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 164 ಅಡಿ ವಿದ್ಯಾರ್ಥಿನಿಯ ಹೇಳಿಕೆಯನ್ನು ದಾಖಲಿಸಲಾಗಿತ್ತು.

ಕಾನೂನು ವಿದ್ಯಾರ್ಥಿನಿಯು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸುವಂತೆ ಉತ್ತರಪ್ರದೇಶ ಸರಕಾರ ಹಾಗೂ ಚಿನ್ಮಯಾನಂದನಿಗೆ ಜಸ್ಟಿಸ್ ಯುಯು ಲಲಿತ್ ಹಾಗೂ ಜಸ್ಟಿಸ್ ವಿನೀತ್ ಸರಣ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಡಿ.9ಕ್ಕೆ ನಿಗದಿಪಡಿಸಿದೆ.

 ಸಂತ್ರಸ್ತ ವಿದ್ಯಾರ್ಥಿನಿ ದಾಖಲಿಸಿದ್ದ ಹೇಳಿಕೆಯ ಪ್ರಮಾಣೀಕೃತ ನಕಲು ಪ್ರತಿಯನ್ನು ಪಡೆಯಲು ಚಿನ್ಮಯಾನಂದಗೆ ಅವಕಾಶ ಮಾಡಿಕೊಟ್ಟಿರುವ ಅಲಹಾಬಾದ್ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ನ.7ರಂದು ಶಹಜಹಾನ್ಪುರ ಕಾನೂನು ವಿದ್ಯಾರ್ಥಿನಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News