ಶೋಭಾ ಕರಂದ್ಲಾಜೆ- ಜಗ್ಗೇಶ್ ನಡುವೆ ಜಟಾಪಟಿಗೆ ಕಾರಣವಾದ 'ಯಶವಂತಪುರ'

Update: 2019-11-16 14:49 GMT

ಬೆಂಗಳೂರು, ನ. 16: ಉಪಚುನಾವಣೆ ಅಖಾಡ ರಂಗೇರುತ್ತಿದ್ದು, ಆಡಳಿತ ಮತ್ತು ವಿಪಕ್ಷಗಳ ಮುಖಂಡರ ನಡುವೆ ಆರೋಪ-ಪ್ರತ್ಯಾರೋಪ ಸಹಜ. ಆದರೆ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ನಟ ಜಗ್ಗೇಶ್ ಯಶವಂತಪುರ ಕ್ಷೇತ್ರದ ಚುನಾವಣಾ ಉಸ್ತುವಾರಿಗಾಗಿ ಜಟಾಪಟಿ ನಡೆಸಿದ್ದಾರೆ.

‘ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಪರ ಕ್ಷೇತ್ರದಲ್ಲಿ ನಾನು ಪ್ರಚಾರ ನಡೆಸುವೆ' ಎಂದು ಜಗ್ಗೇಶ್ ಹೇಳಿದ್ದಾರೆ. ಆದರೆ, ಇದಕ್ಕೆ ಆಕ್ಷೇಪಿಸಿರುವ ಕರಂದ್ಲಾಜೆ, ‘ಯಶವಂತಪುರ ಕ್ಷೇತ್ರಕ್ಕೂ ಮತ್ತು ಜಗ್ಗೇಶ್ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರಿಗೆ ಸ್ವಂತ ಕ್ಷೇತ್ರವೇ ಇಲ್ಲ’ ಎಂದು ಹೇಳಿದ್ದಾರೆ.

ಒಟ್ಟಿಗೆ ಪ್ರಚಾರ ನಡೆಸುವೆ: ಈ ಹಿಂದೆ ನಾನು ಯಶವಂತಪುರ ಕ್ಷೇತ್ರದಿಂದ ಕೊನೆ ಗಳಿಗೆಯಲ್ಲಿ ಅಭ್ಯರ್ಥಿಯಾಗಿದ್ದೆ. ಉಪಚುನಾವಣೆಯಲ್ಲಿ ಸೋಮಶೇಖರ್ ಪರ ಒಟ್ಟಿಗೆ ಪ್ರಚಾರ ನಡೆಸುತ್ತೇನೆ. ಬಿಎಸ್‌ವೈ ಇನ್ನೂ ಮೂರುವರೆ ವರ್ಷ ಸಿಎಂ ಆಗಿರಬೇಕೆಂಬುದಷ್ಟೇ ನಮ್ಮ ಧ್ಯೇಯ ಎಂದು ಜಗ್ಗೇಶ್ ತಿಳಿಸಿದರು.

ಬಿಜೆಪಿ ನಮಗೆ ಮರ, ಅದು ಸದಾ ನಮ್ಮ ನೆರಳಾಗಿರುತ್ತದೆ. ನಾವೆಲ್ಲರೂ ಪಕ್ಷದ ಸೈನಿಕರು. ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ. ಸೋಮಶೇಖರ್ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ ಎಂದು ಜಗ್ಗೇಶ್ ಸ್ಪಷ್ಟಪಡಿಸಿದರು.

ಅವರಿಗೆ ಸ್ವಂತ ಕ್ಷೇತ್ರವೇ ಇಲ್ಲ: ‘ಯಶವಂತಪುರ ಕ್ಷೇತ್ರ ಮತ್ತು ನಟ ಜಗ್ಗೇಶ್ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರಿಗೆ ಸ್ವಂತ ಕ್ಷೇತ್ರವೂ ಇಲ್ಲ. ಸೂಕ್ತ ಅಭ್ಯರ್ಥಿ ಸಿಗದ ಕಾರಣ ಕೊನೆಗಳಿಗೆಯಲ್ಲಿ ಜಗ್ಗೇಶ್‌ಗೆ ಯಶವಂತಪುರ ಕ್ಷೇತ್ರದ ಟಿಕೆಟ್ ನೀಡಲಾಗಿತ್ತು’ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸೋಮಶೇಖರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ ಯಶವಂತಪುರ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡಿದ್ದರು. ಸೋಮಶೇಖರ್ ಬಿಜೆಪಿ ಸೇರುವ ಮೂಲಕ ಪಕ್ಷಕ್ಕೆ ಮತ್ತಷ್ಟು ಬಲ ತಂದಿದ್ದಾರೆ. ಹೀಗಾಗಿ ಅವರ ಗೆಲುವಿಗೆ ನಾನು ಶ್ರಮಿಸುವೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News