ನಾಥೂರಾಮ್ ಗೋಡ್ಸೆಗೆ ಪೂಜೆ: ಹಿಂದೂ ಮಹಾ ಸಭಾದ ವಿರುದ್ಧ ತನಿಖೆಗೆ ಆದೇಶ

Update: 2019-11-16 15:08 GMT
ಫೋಟೊ: ANI

ಭೋಪಾಲ್/ಗ್ವಾಲಿಯರ್, ನ. 16: ಮಹಾತ್ಮಾ ಗಾಂಧಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಗೆ ಮರಣ ದಂಡನೆ ವಿಧಿಸಿದ 70ನೇ ವರ್ಷಾಚರಣೆಯ ದಿನವಾದ ಶನಿವಾರ ಪೂಜೆ ನಡೆಸಿದ ಹಿಂದೂ ಮಹಾಸಭಾದ ಸದಸ್ಯರ ವಿರುದ್ಧ ಮಧ್ಯಪ್ರದೇಶ ಸರಕಾರ ತನಿಖೆಗೆ ಆದೇಶಿಸಿದೆ.

  ‘‘ನಾಥೂರಾಮ್ ಗೋಡ್ಸೆಗೆ ಪೂಜೆ ಸಲ್ಲಿಸಿದ ಪ್ರಕರಣದ ಬಗ್ಗೆ ಗ್ವಾಲಿಯರ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಪೂಜೆಯಲ್ಲಿ ಪಾಲ್ಗೊಂಡ ಹಿಂದೂ ಮಹಾ ಸಭಾದ ಎಲ್ಲ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ’’ ಎಂದು ಕಾನೂನು ಸಚಿವ ಪಿ.ಸಿ. ಶರ್ಮಾ ಹೇಳಿದ್ದಾರೆ.

ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗ್ವಾಲಿಯರ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸತೇಂದ್ರ ತೋಮರ್ ಹೇಳಿದ್ದಾರೆ.

 ನಾಥೂರಾಮ್ ಗೋಡ್ಸೆ ಹಾಗೂ ಆತನ ಸಹವರ್ತಿ ನಾರಾಯಣ ಅಪ್ಟೆಗೆ ಮರಣ ದಂಡನೆ ವಿಧಿಸಿದ 70ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಮಹಾ ಸಭಾ ಗ್ವಾಲಿಯರ್‌ನಲ್ಲಿರುವ ತನ್ನ ಕಚೇರಿಯಿಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಸದಸ್ಯರು ನಾಥುರಾಮ್ ಗೋಡ್ಸೆ ಹಾಗೂ ನಾರಾಯಣ ಅಪ್ಟೆ ಭಾವಚಿತ್ರಗಳಿಗೆ ಹೂ ಮಾಲೆ ಹಾಕಿ ಪೂಜೆ ನಡೆಸಿದ್ದರು.

ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಥೂರಾಮ್ ಗೋಡ್ಸೆ ಹಾಗೂ ನಾರಾಯಣ ಅಪ್ಟೆಯನ್ನು ಅಂಬಾಲ ಕಾರಾಗೃಹದಲ್ಲಿ 1949 ನವೆಂಬರ್ 15ರಂದು ಮರಣದಂಡನೆ ವಿಧಿಸಲಾಗಿತ್ತು.

ಹಿಂದೂ ಮಹಾಸಭಾದ ಕಾರ್ಯಕರ್ತರು 2017ರಲ್ಲಿ ಇದೇ ಕಚೇರಿಯಲ್ಲಿ ನಾಥೂರಾಮ್ ಗೋಡ್ಸೆ ಪ್ರತಿಮೆ ಸ್ಥಾಪಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಅನಂತರ ಗ್ವಾಲಿಯರ್ ಜಿಲ್ಲಾಡಳಿತ ಈ ಪ್ರತಿಮೆಯನ್ನು ವಶಕ್ಕೆ ತೆಗೆದುಕೊಂಡಿತ್ತು ಹಾಗೂ ಅಲ್ಲಿಂದ ತೆರವುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News