ಪಾಕ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ವಿಮಾನಕ್ಕೆ ಪಾಕ್ ವಾಯು ಸಂಚಾರ ನಿಯಂತ್ರಣ ನೆರವು

Update: 2019-11-16 15:29 GMT

Photo:Mint

ಇಸ್ಲಾಮಾಬಾದ್, ನ. 16: ಪಾಕಿಸ್ತಾನದ ನಾಗರಿಕ ವಾಯುಯಾನ ಪ್ರಾಧಿಕಾರದ ವಾಯು ಸಂಚಾರ ನಿಯಂತ್ರಕರೊಬ್ಬರು ಜೈಪುರದಿಂದ ಒಮಾನ್ ರಾಜಧಾನಿ ಮಸ್ಕತ್‌ಗೆ ಹಾರುತ್ತಿದ್ದ ವಿಮಾನವೊಂದನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ವಿಮಾನದ ಪೈಲಟ್ ಅಪಾಯದ ಸಂದೇಶವನ್ನು ಕಳುಹಿಸಿದ್ದರು.

ದಕ್ಷಿಣ ಸಿಂಧ್ ಪ್ರಾಂತದ ಚೋರ್ ಪ್ರದೇಶದ ಸಮೀಪ ವಿಮಾನಕ್ಕೆ ಅಸಹಜ ಹವಾಮಾನ ಪರಿಸ್ಥಿತಿ ಎದುರಾಯಿತು ಎಂದು ಪಾಕಿಸ್ತಾನದ ವಿಮಾನಯಾನ ಪ್ರಾಧಿಕಾರದ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ದ ನ್ಯೂಸ್ ಇಂಟರ್‌ನ್ಯಾಶನಲ್’ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಸುಮಾರು 150 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನವು ಗುರುವಾರ ಕರಾಚಿ ವಲಯದ ಆಕಾಶದಲ್ಲಿ ಹಾರುತ್ತಿದ್ದಾಗ ಮಿಂಚಿನ ನಡುವೆ ಸಿಲುಕಿಕೊಂಡಿತು ಹಾಗೂ ತಕ್ಷಣವೇ ಅದರ ಹಾರಾಟದ ಎತ್ತರ 36,000 ಅಡಿಯಿಂದ 34,000 ಅಡಿಗೆ ಕುಸಿಯಿತು.

ಆಗ, ವಿಮಾನ ಪೈಲಟ್ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅನುಸರಿಸಬೇಕಾದ ವಿಧಾನಗಳಿಗೆ ಚಾಲನೆ ನೀಡಿದರು ಹಾಗೂ ಅದರ ಭಾಗವಾಗಿ ಸಮೀಪದ ನಿಲ್ದಾಣಗಳಿಗೆ ‘ಮೇಡೇ’ (ಅಪಾಯದ) ಸಂದೇಶಗಳನ್ನು ಕಳುಹಿಸಿದರು ಎಂದು ಪಿಟಿಐ ಹೇಳಿದೆ.

ಪೈಲಟ್‌ರ ತುರ್ತು ನೆರವು ಕರೆಗೆ ಸ್ಪಂದಿಸಿದ ಪಾಕಿಸ್ತಾನದ ವಾಯು ಸಂಚಾರ ನಿಯಂತ್ರಕರು, ಪಾಕಿಸ್ತಾನಿ ವಾಯುಪ್ರದೇಶದಲ್ಲಿನ ಉಳಿದ ಪ್ರಯಾಣವನ್ನು ಮುಂದುವರಿಸಲು ಸೂಕ್ತ ನಿರ್ದೇಶನಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News