ಲಂಕಾ ಚುನಾವಣೆ: ಮಾಜಿ ಸೇನಾಧಿಕಾರಿ, ಸಚಿವ ನಡುವೆ ಬಿರುಸಿನ ಸಮರ

Update: 2019-11-16 16:36 GMT

ಕೊಲಂಬೊ, ನ. 16: ಶ್ರೀಲಂಕಾದ ನೂತನ ಅಧ್ಯಕ್ಷರನ್ನು ಆರಿಸಲು ಶನಿವಾರ ದ್ವೀಪ ರಾಷ್ಟ್ರದಲ್ಲಿ ಮತದಾನ ನಡೆದಿದೆ. ಈ ವರ್ಷದ ಎಪ್ರಿಲ್‌ನಲ್ಲಿ ಈಸ್ಟರ್ ರವಿವಾರದ ದಿನ ಹೊಟೇಲ್‌ಗಳು ಮತ್ತು ಚರ್ಚ್‌ಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ಚೇತರಿಸಿಕೊಳ್ಳಲು ದೇಶ ಪರದಾಡುತ್ತಿರುವ ನಡುವೆಯೇ ಅಲ್ಲಿ ಚುನಾವಣೆ ನಡೆಯುತ್ತಿದೆ.

35 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರಾದರೂ, ಮಾಜಿ ರಕ್ಷಣಾ ಕಾರ್ಯದರ್ಶಿ ಹಾಗೂ ಮಾಜಿ ಸೇನಾಧಿಕಾರಿ ಗೊಟಬಯ ರಾಜಪಕ್ಸ ಮತ್ತು ಸಚಿವ ಸಜಿತ್ ಪ್ರೇಮದಾಸ ಮುಂಚೂಣಿಯಲ್ಲಿದ್ದಾರೆ.

ರಾಜಪಕ್ಸ, ಪ್ರತಿಪಕ್ಷ ಶ್ರೀಲಂಕಾ ಪೊಡುಜನ ಪೆರಮುನದ ಅಭ್ಯರ್ಥಿಯಾಗಿದ್ದಾರೆ. ಸಹೋದರ ಹಾಗೂ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಜೊತೆ ಸೇರಿ, ಎಲ್ಟಿಟಿಇಯನ್ನು ಸೋಲಿಸುವ ಮೂಲಕ ಶ್ರೀಲಂಕಾದ 26 ವರ್ಷಗಳ ಆಂತರಿಕ ಯುದ್ಧವನ್ನು ಕೊನೆಗೊಳಿಸಿರುವ ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ. ಹಾಗಾಗಿ ಅವರು ಬಹುಸಂಖ್ಯಾತ ಸಿಂಹಳ ಬೌದ್ಧರ ಹೀರೋ ಆಗಿದ್ದಾರೆ.

ಈಸ್ಟರ್ ಸಂಡೇ ಬಾಂಬ್ ಸ್ಫೋಟಗಳ ಹಿನ್ನೆಲೆಯಲ್ಲಿ, ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವೆ ಹಾಗೂ ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡುವೆ ಎಂದು ಅವರು ಘೋಷಿಸಿದ್ದಾರೆ.

ಅವರ ಪ್ರಮುಕ ಪ್ರತಿಸ್ಪರ್ಧಿ ಮಾಜಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸರ ಮಗ ಸಜಿತ್ ಪ್ರೇಮದಾಸ ಆಗಿದ್ದಾರೆ. ಅವರು ಪ್ರಸ್ತುತ ಯುನೈಟೆಡ್ ನ್ಯಾಶನಲ್ ಪಾರ್ಟಿ ಸರಕಾರದಲ್ಲಿ ವಸತಿ ಸಚಿವರಾಗಿದ್ದಾರೆ.

ಅತಿ ದೊಡ್ಡ ತಮಿಳು ಪಕ್ಷ ಪ್ರೇಮದಾಸಗೆ ಬೆಂಬಲ

ಗೊಟಬಯ ಮತ್ತೆ ಅಧಿಕಾರಕ್ಕೆ ಮರಳುವ ಭೀತಿಯಿಂದಾಗಿ, ತಮಿಳರನ್ನು ಪ್ರತಿನಿಧಿಸುವ ಅತಿ ದೊಡ್ಡ ಪಕ್ಷ ತಮಿಳ್ ನ್ಯಾಶನಲ್ ಅಲಯನ್ಸ್ ಪ್ರೇಮದಾಸರಿಗೆ ಬೆಂಬಲ ನೀಡಿದೆ.

ಶ್ರೀಲಂಕಾದ 2.10 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು 9.7 ಶೇಕಡವಿದ್ದರೆ, ತಮಿಳರ ಪಾಲು 12.6 ಶೇಕಡವಿದೆ. ಪ್ರೇಮದಾಸ ತಮಿಳು ಮತ್ತು ಮುಸ್ಲಿಮರ ಮತಗಳನ್ನು ನೆಚ್ಚಿಕೊಂಡಿದ್ದಾರೆ.

ತಾನು ಆಯ್ಕೆಯಾದರೆ, ಅಣ್ಣ ಮಹಿಂದ ರಾಜಪಕ್ಸರನ್ನು ಪ್ರಧಾನಿ ಮಾಡುವುದಾಗಿ ಗೊಟಬಯ ರಾಜಪಕ್ಸ ಈಗಾಗಲೇ ಘೋಷಿಸಿದ್ದಾರೆ.

ಮುಸ್ಲಿಮ್ ಮತದಾರರಿದ್ದ ಬಸ್‌ಗಳ ಮೇಲೆ ಗುಂಡು

ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸುವುದಕ್ಕಾಗಿ ಶನಿವಾರ ಮುಸ್ಲಿಮ್ ಮತದಾರರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್‌ಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಮುಸ್ಲಿಮರು ಮತ ಚಲಾಯಿಸದಂತೆ ಅವರನ್ನು ಬೆದರಿಸಲು ಹೀಗೆ ಮಾಡಲಾಗಿದೆ ಎಂಬುದಾಗಿ ಭಾವಿಸಲಾಗಿದೆ.

ವಾಯುವ್ಯ ಪಟ್ಟಣ ಪುಟ್ಟಲಂನ ನೂರಾರು ಮುಸ್ಲಿಮ್ ಮತದಾರರನ್ನು ಕರೆದುಕೊಂಡು ಹೋಗುತ್ತಿದ್ದ 100ಕ್ಕೂ ಅಧಿಕ ವಾಹನಗಳ ಸಾಲಿನ ಎದುರು ದುಷ್ಕರ್ಮಿಗಳು ಟಯರ್‌ಗಳನ್ನು ಸುಟ್ಟರು ಹಾಗೂ ತಡೆಗಳನ್ನು ಇಟ್ಟರು ಎಂದು ಪೊಲೀಸರು ತಿಳಿಸಿದರು. ‘‘ಬಳಿಕ ಅವರು ವಾಹನಗಳ ಮೇಲೆ ಗುಂಡು ಹಾರಿಸಿದರು ಹಾಗೂ ಕಲ್ಲೆಸೆದರು’’ ಎಂದು ಪೊಲೀಸರು ಹೇಳಿದರು.

ಎರಡು ಬಸ್‌ಗಳಿಗೆ ಹಾನಿಯಾಗಿದೆ. ಬಸ್‌ಗಳಲ್ಲಿದ್ದವರಿಗೆ ಗಾಯವಾದ ಬಗ್ಗೆ ವರದಿಗಳು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News