ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ದಿಲ್ಲಿಯಲ್ಲಿ ನ. 30ರಂದು ಭಾರತ್ ಬಚಾವೊ ರ್ಯಾಲಿ

Update: 2019-11-16 17:55 GMT

 ಹೊಸದಿಲ್ಲಿ, ನ.16: ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸುವ ಜೊತೆಗೆ, ನವೆಂಬರ್ 30ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯವನ್ನು ಜನತೆಯ ಮುಂದಿಡುವ ಉದ್ದೇಶದಿಂದ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನಡೆಸಲಾಗುತ್ತಿರುವ ಪ್ರತಿಭಟನೆಯನ್ನು ನವೆಂಬರ್ 25ರೊಳಗೆ ಮುಗಿಸಲು ತೀರ್ಮಾನಿಸಲಾಗಿದೆ. ನವೆಂಬರ್ 30ರಂದು ಕೇಂದ್ರ ಸರಕಾರದ ಜನವಿರೋಧಿ ನೀತಿಯ ವಿರುದ್ಧ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಭಾರತ್ ಬಚಾವೊ ರ್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

 ಶನಿವಾರ ಪ್ರತಿಭಟನಾ ಕಾರ್ಯಕ್ರಮದ ಬಗ್ಗೆ ಚರ್ಚಿಸಲು ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಸಮಿತಿಗಳ ಅಧ್ಯಕ್ಷರು, ವಿಭಾಗದ ಮುಖ್ಯಸ್ಥರು, ರಾಜ್ಯ ಘಟಕದ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರು ಭಾಗವಹಿಸಿದ್ದರು. ಕೇಂದ್ರ ಸರಕಾರದ ವೈಫಲ್ಯ, ವಿಶೇಷವಾಗಿ ಆರ್ಥಿಕ ಹಿಂಜರಿತ, ರೈತರ ಸಮಸ್ಯೆ, ನಿರುದ್ಯೋಗ ಸಮಸ್ಯೆ ಹಾಗೂ ಇತರ ವಿಷಯಗಳ ಬಗ್ಗೆ ಜನರ ಗಮನ ಸೆಳೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News