ಕಳೆದ 2 ವರ್ಷಗಳಿಂದ ಟೆಸ್ಟ್ ನ 2ನೇ ಇನಿಂಗ್ಸ್‌ನಲ್ಲಿ ಶಮಿ ಯಶಸ್ವಿ ಪ್ರದರ್ಶನ

Update: 2019-11-16 18:25 GMT

ಇಂದೋರ್, ನ.16: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಕಳೆದ ಎರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಎದುರಾಳಿ ತಂಡಕ್ಕೆ ಸಿಂಹಸ್ವಪ್ನ ಎನಿಸಿಕೊಳ್ಳುವುದರೊಂದಿಗೆ ಯಶಸ್ವಿ ಪ್ರದರ್ಶನ ನೀಡುತ್ತಿದ್ದಾರೆ.

29ರ ಹರೆಯದ ಶಮಿ 17ರ ಸರಾಸರಿಯಲ್ಲಿ 20 ಇನಿಂಗ್ಸ್‌ಗಳಲ್ಲಿ 51 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ ಟೆಸ್ಟ್‌ನ 2ನೇ ಇನಿಂಗ್ಸ್ ನಲ್ಲಿ 25 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆಯುತ್ತಿರುವ ಬೌಲರ್‌ಗಳ ಪೈಕಿ ಶಮಿ ಶ್ರೇಷ್ಠ ಸ್ಟ್ರೈಕ್‌ರೇಟ್(32.2)ದಾಖಲಿಸಿದ್ದಾರೆ.

 ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಹಾಗೂ ನಥನ್ ಲಿಯೊನ್ ಕ್ರಮವಾಗಿ 48 ಹಾಗೂ 47 ವಿಕೆಟ್‌ಗಳನ್ನು ಪಡೆಯುವುದರೊಂದಿಗೆ ಶಮಿಗೆ ಸ್ಪರ್ಧೆಯೊಡ್ಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ(34 ವಿಕೆಟ್‌ಗಳು), ರವೀಂದ್ರ ಜಡೇಜ(32), ಜಸ್‌ಪ್ರೀತ್ ಬುಮ್ರಾ(29) ಹಾಗೂ ಜೋಶ್ ಹೇಝಲ್‌ವುಡ್(29) ಬಳಿಕದ ಸ್ಥಾನದಲ್ಲಿದ್ದಾರೆ.

ಪಂದ್ಯದ ಅಂತ್ಯದಲ್ಲಿ ಸಾಮಾನ್ಯವಾಗಿ ಸ್ಪಿನ್ ಬೌಲರ್‌ಗಳು ಹೆಚ್ಚು ವಿಕೆಟ್‌ಗಳನ್ನು ಪಡೆಯುತ್ತಾರೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಅಗ್ರ-10 ಬೌಲರ್‌ಗಳ ಪೈಕಿ ಕೇವಲ ಇಬ್ಬರು ಸ್ಪಿನ್ನರ್‌ಗಳಿದ್ದಾರೆ.

ಇಂದೋರ್ ಟೆಸ್ಟ್‌ನಲ್ಲಿ ಶಮಿ ಮೂರನೇ ಶ್ರೇಷ್ಠ ಬೌಲಿಂಗ್ ಸಂಘಟಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಅವರು 31 ರನ್ ವೆಚ್ಚದಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವರ್ಷಾರಂಭದಲ್ಲಿ ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶಮಿ ಜೀವನಶ್ರೇಷ್ಠ ಬೌಲಿಂಗ್(5-35)ಮಾಡಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ಭಾರತ 3-0 ಅಂತರದಿಂದ ಟೆಸ್ಟ್ ಸರಣಿ ಜಯಿಸಿದಾಗ ಶಮಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ಶಮಿ ಕಳೆದ 2 ವರ್ಷಗಳಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಮೂರು ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. 23 ವರ್ಷಗಳ ಬಳಿಕ ಭಾರತದಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಆಗಿದ್ದಾರೆ. ಶಮಿ ಅವರ ಮಾರಕ ಬೌಲಿಂಗ್ ಶೈಲಿಯನ್ನು ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News