ಟಿಕೆಟ್ ತಪ್ಪಿದ ಬಿಜೆಪಿ ಹಿರಿಯ ನಾಯಕನಿಂದ ಜಾರ್ಖಂಡ್ ಸಿಎಂಗೇ ಸೆಡ್ಡು

Update: 2019-11-17 04:06 GMT

ಪಾಟ್ನಾ, ನ.17: ಜಾರ್ಖಂಡ್ ವಿಧಾನಸಭೆಗೆ ನಡೆಯುವ ಐದು ಹಂತದ ಚುನಾವಣೆಗೆ ಸ್ಪರ್ಧಿಸಲು ಹಿರಿಯ ಬಿಜೆಪಿ ಮುಖಂಡ ಮತ್ತು ಜಾರ್ಖಂಡ್ ಸಚಿವ ಸರಯು ರಾಯ್ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದ್ದು, ಮುಖ್ಯಮಂತ್ರಿ ರಘುಬರದಾಸ್ ವಿರುದ್ಧ ಸರಯು ರಾಯ್ ಬಂಡಾಯದ ಕಹಳೆ ಮೊಳಗಿಸಿದ್ದಾರೆ.

ನವೆಂಬರ್ 30ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಬಿಜೆಪಿ ತನ್ನ ನಾಲ್ಕನೇ ಹಾಗೂ ಅಂತಿಮ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿದೆ. ಅದರಲ್ಲೂ ಸರಯು ರಾಯ್ ಹೆಸರಿಲ್ಲ. ಈ ಹಿನ್ನೆಲೆಯಲ್ಲಿ ಜೆಮ್‌ಶೆಡ್‌ಪುರ ಪೂರ್ವ ಕ್ಷೇತ್ರದಿಂದ ಮುಖ್ಯಮಂತ್ರಿ ವಿರುದ್ಧವೇ ಕಣಕ್ಕೆ ಇಳಿಯುವುದಾಗಿ ಅವರು ಘೋಷಿಸಿದ್ದಾರೆ.

ನಿರಂತರವಾಗಿ ಪಕ್ಷ ವಿರೋಧಿ ಧೋರಣೆಯನ್ನು ಅನುಸರಿಸುತ್ತಾ ಬಂದ ಕಾರಣಕ್ಕಾಗಿಯೇ ರಾಯ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ರಾಯ್ ಶನಿವಾರ, ವಿರೋ ಪಕ್ಷದ ಮುಖಂಡ ಜಾರ್ಖಂಡ್ ಮುಕ್ತಿ ಮೋರ್ಚಾದ ಮುಖ್ಯಮಂತ್ರಿ ಅಭ್ಯರ್ಥಿ ಹೇಮಂತ್ ಸೊರೆನ್ ಅವರ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿ, ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು. ನಾಮಪತ್ರ ಸಲ್ಲಿಸಲು ಎರಡು ದಿನಗಳಷ್ಟೇ ಬಾಕಿ ಉಳಿದಿದೆ.

ಭ್ರಷ್ಟಾಚಾರ ವಿರುದ್ಧ ಸಮರ ಸಾರುತ್ತಾ ಬಂದಿರುವ ರಾಯ್, ಬಿಹಾರದಲ್ಲಿ ಮೇವು ಹಗರಣದ ಸಂಬಂಧ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಹಾಗೂ ಜಾರ್ಖಂಡ್‌ನಲ್ಲಿ ಮಾಜಿ ಸಿಎಂ ಮಧುಕೋಡಾ ಅವರನ್ನು ಕಲ್ಲಿದ್ದಲು ಗಣಿ ಹಂಚಿಕೆ ಸಂಬಂಧ ಜೈಲಿಗೆ ಅಟ್ಟಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಮಧು ಕೋಡಾ ಸಿಎಂ ಆಗಿದ್ದ ಅವಧಿಯಲ್ಲಿ 130 ಕೋಟಿ ರೂಪಾಯಿ ಔಷಧ ಖರೀದಿ ಹಗರಣದ ಆರೋಪಿ ಭಾನುಪ್ರತಾಪ್ ಸಾಹಿ ಎಂಬುವವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಗ್ಗೆ ರಾಯ್ ಅಸಮಾಧಾನ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News