ಗೊಟಬಯ ರಾಜಪಕ್ಸ ಶ್ರೀಲಂಕಾದ ಹೊಸ ಅಧ್ಯಕ್ಷ

Update: 2019-11-17 18:02 GMT
ಫೋಟೊ:  Dinuka Liyanawatte/Reuters

ಕೊಲಂಬೊ, ನ.17: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯ ಮತ ಏಣಿಕೆ ರವಿವಾರ ನಡೆದಿದ್ದು, ಹತ್ತು ವರ್ಷಗಳ ಹಿಂದೆ ಎಲ್ಟಿಟಿಟಿಇ ಬಂಡುಕೋರ ದಮನ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮಾಜಿ ಸೇನಾ ಕರ್ನಲ್ ಗೊಟಬಯ ರಾಜಪಕ್ಸ ಅವರು ಪ್ರಚಂಡ ಗೆಲುವು ಸಾಧಿಸಿದ್ದಾರೆ.

ಗೊಟಬಯ ರಾಜಪಕ್ಸ ಅವರಿಗೆ ಶೇ.54 ಮತಗಳು ದೊರೆತಿದ್ದು, ಅವರ ಪ್ರಮುಖ ಪ್ರತಿಸ್ಪರ್ಧಿ, ಆಡಳಿತಾರೂಢ ಪಕ್ಷದ ಅಭ್ಯರ್ಥಿ ಸಜಿತ್ ಪ್ರೇಮದಾಸ ಸೋಲೊಪ್ಪಿಕೊಂಡಿದ್ದಾರೆ.

ಶನಿವಾರ ನಡೆದ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ 60 ಲಕ್ಷಕ್ಕೂ ಅಧಿಕ ಮಂದಿ ಮತ ಚಲಾಯಿಸಿದ್ದರು. 70 ವರ್ಷ ವಯಸ್ಸಿನ ಗೊಟಬಯ ಅವರು 2005ರಿಂದ 2015ರವರೆಗೆ ಶ್ರೀಲಂಕಾ ಅಧ್ಯಕ್ಷರಾಗಿದ್ದ ಮಹಿಂದಾ ರಾಜಪಕ್ಸ ಅವರ ಕಿರಿಯ ಸಹೋದರ.

ಆಡಳಿತ ಪಕ್ಷದ ಅಭ್ಯರ್ಥಿ 52 ವರ್ಷದ ಪ್ರೇಮದಾಸ ಅವರಿಗೆ 44.4 ಶೇಕಡ ಮತಗಳು ದೊರೆತಿವೆ.ತಮಿಳರ ಪ್ರಾಬಲ್ಯದ ಪ್ರದೇಶಗಳಲ್ಲಿ ಪ್ರೇಮದಾಸ ಅವರು ಮುನ್ನಡೆ ಸಾಧಿಸಿದ್ದರಾದರೂ,ಸಿಂಹಳೀಯರು ಅಧಿಕವಾಗಿರುವ ಕ್ಷೇತ್ರಗಳಲ್ಲಿ ಅವರಿಗೆ ತೀರಾ ಕಡಿಮೆ ಮತಗಳು ದೊರೆತಿವೆ.

ಶ್ರೀಲಂಕಾದ 1.59 ಕೋಟಿ ಮತದಾರರ ಪೈಕಿ ಶೇ.80ರಷ್ಟು ಮಂದಿ ಮತಚಲಾ ಯಿಸಿದ್ದಾರೆಂದು ಚುನಾವಣಾ ಆಯೋಗದ ಅಧ್ಯಕ್ಷ ಮಹಿಂದಾ ದೇಶಪ್ರಿಯಾ ಹೇಳಿದ್ದಾರೆ.

ಎಪ್ರಿಲ್ 21ರಂದು ಶ್ರೀಲಂಕಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗಳು ನಡೆದ ಬಳಿಕ ಗೊಟಬಯ ರಾಜಪಕ್ಸ ಅವರು ಧಾರ್ಮಿಕ ತೀವ್ರವಾದವನ್ನು ಹತ್ತಿಕ್ಕುವ ಶಪಥ ದೊಂದಿಗೆ ರಾಷ್ಟ್ರೀಯವಾದಿ ಆಂದೋಲವನ್ನು ನಡೆಸಿದ್ದರು.

ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯು ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಅವರ ಸಂಯುಕ್ತ ರಾಷ್ಟ್ರೀಯ ಪಕ್ಷ (ಯುಎನ್‌ಪಿ) ಅಗ್ನಿಪರೀಕ್ಷೆಯಾಗಿತ್ತು. ರಾನಿಲ್ ವಿಕ್ರಮಸಿಂಘೆ ಅವರು ತನ್ನ ಸಂಪುಟದ ಉಪಪ್ರಧಾನಿ ಪ್ರೇಮದಾಸ ಅವರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದ್ದರು.

ನೆರೆಹೊರೆಯ ರಾಷ್ಟ್ರವಾದ ಭಾರತದ ಗುಪ್ತಚರ ಸಂಸ್ಥೆ ಸುಳಿವು ನೀಡಿದ ಹೊರತಾಗಿಯೂ, ಎಪ್ರಿಲ್ 21ರ ಭಯೋತ್ಪಾದಕ ದಾಳಿಯನ್ನು ತಡೆಯಲು ವಿಫಲರಾದುದಕ್ಕಾಗಿ ಪ್ರಧಾನಿ ವಿಕ್ರಮಸಿಂಘೆ ತೀವ್ರ ಟೀಕೆಗೆ ಒಳಗಾಗಿದ್ದರು.

ಎಲ್ಟಿಟಿಇ ನಿರ್ಮೂಲನದ ರೂವಾರಿ

ಶ್ರೀಲಂಕಾದಲ್ಲಿ 2009ರಲ್ಲಿ ಎಲ್ಟಿಟಿಇ ಬಂಡುಕೋರರ ವಿರುದ್ಧ ನಡೆದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಗೊಟಬಯ ರಾಜಪಕ್ಸೆ ಬಹುಸಂಖ್ಯಾತ ಸಿಂಹಳೀಯರು ಹಾಗೂ ಪ್ರಭಾವಿ ಬೌದ್ಧ ಧರ್ಮಗುರುಗಳ ಅಪಾರ ಬೆಂಬಲ ಪಡೆದಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಆಗಿದ್ದ ಗೊಟಬಯ ರಾಜಪಕ್ಸ ನೇತೃತ್ವದಲ್ಲಿ ಶ್ರೀಲಂಕಾ ಸೇನೆಯು ತಮಿಳು ಬಂಡುಕೋರರನ್ನು ಮಟ್ಟಹಾಕುವ ಮೂಲಕ 30 ವರ್ಷಗಳ ದೀರ್ಘಕಾಲದ ಅಂತರ್ಯುದ್ಧಕ್ಕೆ ಅಂತ್ಯ ಹಾಡಿತ್ತು.

ಆದರೆ ಶ್ರೀಲಂಕಾದ ಜನಸಂಖ್ಯೆಯ ಶೇಕಡ 15ರಷ್ಟಿರುವ ತಮಿಳರಲ್ಲಿ ಬಹುತೇಕ ಮಂದಿ ಗೊಟಬಯ ರಾಜಪಕ್ಸ ಅವರನ್ನು ವಿರೋಧಿಸುತ್ತಿದ್ದಾರೆ. ಎಲ್ಟಿಟಿಇ ಬಂಡುಕೋರರನ್ನು ದಮನಿಸುವ ಹೆಸರಿನಲ್ಲಿ ಗೊಟಬಯ ನೇತೃತ್ವದ ಶ್ರೀಲಂಕಾ ಸೇನೆಯು 40 ಸಾವಿರಕ್ಕೂ ಅಧಿಕ ಮಂದಿ ತಮಿಳರನ್ನು ಹತ್ಯೆಗೈದಿದೆಯೆಂದು ಮಾನವಹಕ್ಕು ಸಂಘಟನೆಗಳು ಆಪಾದಿಸಿದ್ದವು.

ಶ್ರೀಲಂಕಾದ ಒಟ್ಟು ಜನಸಂಖ್ಯೆಯ ಶೇ.10ರಷ್ಟಿರುವ ಮುಸ್ಲಿಮ್ ಸಮದಾಯಕ್ಕೂ ಗೋಟಾಬಯಾ ಅಧ್ಯಕ್ಷರಾಗಿರುವುದು ಆತಂಕವುಂಟು ಮಾಡಿದೆ. ಎಪ್ರಿಲ್‌ನಲ್ಲಿ ನಡೆದ ಸರಣಿ ಬಾಂಬ್ ದಾಳಿಯ ಬಳಿಕ, ಶ್ರೀಲಂಕಾದ ಹಲವೆಡೆ ಮುಸ್ಲಿಮರು ಗುಂಪು ದಾಳಿಗೆ ಒಳಗಾಗಿದ್ದರು.

 ರಾಜಪಕ್ಸ ಅವರು ಅಧ್ಯಕ್ಷರಾಗಿದ್ದಾಗ ಅವರ ರಕ್ಷಣಾ ಕಾರ್ಯದರ್ಶಿಯಾಗಿ ಗೋಟಾಬಯಾ ಕೆಲಸ ಮಾಡಿದ್ದರು. ಭದ್ರತಾಪಡೆಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದ ರಾಜಪಕ್ಸ ಅವರು ರಾಜಕೀಯ ವಿರೋಧಿಗಳು, ಪತ್ರಕರ್ತರು ಮತ್ತು ಇತರರ ಮೇಲೆ ಹಲ್ಲೆ, ಆಕ್ರಮಣಗಳನ್ನು ನಡೆಸುತ್ತಿದ್ದ ‘ಡೆತ್‌ಸ್ಕ್ವಾಡ್’ತಂಡದ ಉಸ್ತುವಾರಿ ಹೊಂದಿದ್ದರು ಎಂದು ಹೇಳಲಾಗುತ್ತದೆ. ಆದರೆ ಈ ಆರೋಪಗಳನ್ನು ಗೊಟಬಯ ನಿರಾಕರಿಸಿದ್ದಾರೆ. 2006ರ ಡಿಸೆಂಬರ್‌ನಲ್ಲಿ ಗೊಟಬಯ ಅವರು ಶಂಕಿತ ಎಲ್ಟಿಟಿಇ ಬಂಡುಕೋರರ ನಡೆಸಿದ ಹತ್ಯಾಯತ್ನದಿಂದ ಪಾರಾಗಿದ್ದರು.

ಚೀನಾ ಪರ ಒಲವು ಹೊಂದಿದವರೆನ್ನಲಾದ ಗೊಟಬಯ ಅವರು ರಕ್ಷಣಾ ಕಾರ್ಯದರ್ಶಿಯಾಗಿದ್ದಾಗ ಶ್ರೀಲಂಕಾವು ಚೀನಾಕ್ಕೆ ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯ ಯೋಜನೆಗಳ ಗುತ್ತಿಗೆ ನೀಡಿತ್ತು ಹಾಗೂ 2014ರಲ್ಲಿ ಚೀನಿ ನೌಕಾಪಡೆಯ ಎರಡು ಜಲಾಂತರ್ಗಾಮಿ ನೌಕೆಗಳು ತನ್ನ ಸಮುದ್ರ ಪ್ರದೇಶದಲ್ಲಿ ಲಂಗರು ಹಾಕಲು ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News