ಬೆಂಗಳೂರಿನಲ್ಲಿಯೇ ಫಿಲಂ ಸಿಟಿ ಸ್ಥಾಪನೆ: ಡಿಸಿಎಂ ಡಾ.ಅಶ್ವಥ್ ನಾರಾಯಣ

Update: 2019-11-17 15:56 GMT

ಬೆಂಗಳೂರು, ನ. 17: ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿ ಚಿತ್ರನಗರಿ(ಫಿಲಂ ಸಿಟಿ)ಯನ್ನು ಬೆಂಗಳೂರಿನಲ್ಲಿಯೇ ಸ್ಥಾಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

ರವಿವಾರ ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಪದ್ಮಭೂಷಣ ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದಲ್ಲಿ ಫಿಲಂ ಸಿಟಿ ಸ್ಥಾಪಿಸಲು ಈಗಾಗಲೇ ನಾಲ್ಕೈದು ಜಾಗಗಳನ್ನು ಗುರುತಿಸಲಾಗಿದ್ದು, ಪರಿಸರ ಸಮಸ್ಯೆಯಿಂದಾಗಿ ಯಾವುದೂ ಅಂತಿಮವಾಗಿಲ್ಲ. ಇನ್ನು ಹಲವು ಕಡೆಗಳಲ್ಲಿ ಜಾಗವನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಿಂದಲೂ ಚಿತ್ರನಗರಿ ನಿರ್ಮಾಣದ ಬೇಡಿಕೆ ಇದ್ದೇ ಇದೆ. ನಮ್ಮ ಸರಕಾರ ಈ ಬೇಡಿಕೆಯನ್ನು ಈಡೇರಿಸುವ ಬದ್ಧತೆ ಹೊಂದಿದೆ. ಸಿಎಂ ಯಡಿಯೂರಪ್ಪನವರು ಚಿತ್ರನಗರಿ ಸ್ಥಾಪನೆಯ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ. ಅದರಂತೆ ಸರಿಯಾದ ಸ್ಥಳ ಹುಡುಕಿ ಬೆಂಗಳೂರಿನಲ್ಲೇ ಚಿತ್ರನಗರಿ ಮಾಡುತ್ತೇವೆ ಎಂದು ಹೇಳಿದರು.

ಈ ಹಿಂದೆ ಅಧಿಕಾರದಲ್ಲಿದ್ದವರು ತಮ್ಮ ಊರುಗಳಿಗೆ ಚಿತ್ರನಗರಿ ಕೊಂಡೊಯ್ಯುವ ಪ್ರಯತ್ನ ನಡೆಸಿದ್ದರು. ಆದರೆ ಬೆಂಗಳೂರಿನಲ್ಲೇ ಚಿತ್ರನಗರಿ ಸ್ಥಾಪನೆಯಾದರೆ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಹೀಗಾಗಿ, ಬೆಂಗಳೂರಿನಲ್ಲೇ ಚಿತ್ರನಗರಿ ತಲೆಯೆತ್ತಲಿದೆ. ಕಲೆಗೆ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡಿದೆ. ಕಲೆಗೆ ಪ್ರೋತ್ಸಾಹವನ್ನು ನೀಡುತ್ತಿದೆ ಎಂದು ತಿಳಿಸಿದರು.

ಈ ವರ್ಷದ ಪ್ರಶಸ್ತಿಯನ್ನು ಹಿರಿಯ ನಟ ಡಾ.ಅಂಬರೀಶ್ ಅವರಿಗೆ ಮರಣೋತ್ತರವಾಗಿ ನೀಡುತ್ತಿರುವುದು ಖಷಿ ತಂದಿದೆ. ಅಂಬರೀಶ್ ಅವರು ನನ್ನ ಉದ್ಯಮದ ಎಲ್ಲ ಕಾರ್ಯಗಳನ್ನು ತಮ್ಮ ಕೈಯಾರೆ ಉದ್ಘಾಟಿಸಿದ್ದರು. ನನ್ನದೂ ಅವರದೂ ಬಹಳ ವರ್ಷದ ನಂಟು. ಚಿಕ್ಕಂದಿನಿಂದಲೂ ನಾನು ಅಂಬರೀಶ್ ಅವರ ಅಭಿಮಾನಿ ಎಂದು ಹೇಳಿದರು. ನಾನು ಮೊದಲಿನಿಂದಲೂ ಸಿನಿಮಾ ನೋಡುತ್ತಲೇ ಬೆಳೆದಿದ್ದೇನೆ. ಅಂಬರೀಶ್ ಅವರ ಸಿನಿಮಾಗಳನ್ನು ಹಲವು ಬಾರಿ ನೋಡಿದ್ದೇನೆ. ಈಗ ಕಾರ್ಯ ಒತ್ತಡದಿಂದ ಸಿನಿಮಾ ನೋಡುವುದು ಕಡಿಮೆಯಾಗಿದೆ. 3 ಗಂಟೆಗಳಲ್ಲಿ ಸಿನಿಮಾ ನಮ್ಮ ಬದುಕಿಗೆ ಪ್ರೇರಣೆ ತರುವ, ಉತ್ಸಾಹ ಮೂಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.

ಪದ್ಮಭೂಷಣ ಡಾ. ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿಯನ್ನು ಅಂಬರೀಶ್ ಅವರ ಪರವಾಗಿ ಅವರ ಪತ್ನಿ ಸಂಸದೆ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಸ್ವೀಕರಿಸಿದರು.

ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಅಂಬರೀಶ್ ಅವರ ಪ್ರಶಸ್ತಿಯನ್ನು ಸ್ವೀಕರಿಸಿರುವುದು ತಮಗೆ ಸಂತಸ ತಂದಿದೆ. ಹಾಗೆಯೇ ಅವರಿಲ್ಲದ ದುಃಖವೂ ನನ್ನನ್ನು ಕಾಡುತ್ತಿದೆ. ನನ್ನ ಜೀವನದಲ್ಲಿ ಅಂಬರೀಶ್ ಅವರಂತಹ ಮೇರು ವ್ಯಕ್ತಿತ್ವದ ವ್ಯಕ್ತಿಯನ್ನು ಇದುವರೆಗೂ ಭೇಟಿಯಾಗಿಲ್ಲ. ಅಂಬರೀಶ್ ಅವರ ಪತ್ನಿಯಾಗಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದರು. ಡಾ.ಬಿ.ಸರೋಜಾದೇವಿ ಹಾಗೂ ಅಂಬರೀಶ್ ಅವರ ಅಕ್ಕತಮ್ಮನ ವಾತ್ಸಲ್ಯದ ಹಲವು ಉತ್ತಮ ಕ್ಷಣಗಳನ್ನು ಅವರು ನೆನಪಿಸಿಕೊಂಡರು. ಡಾ. ಬಿ.ಡಾ.ಬಿ.ಸರೋಜಾದೇವಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕಳೆದ 10 ವರ್ಷಗಳಲ್ಲಿ ಅಂಬರೀಶ್ ಅವರು ತಪ್ಪಿಸಿಕೊಂಡಿದ್ದೇ ಇಲ್ಲ. ಪ್ರತಿ ವರ್ಷ ಈ ಸಮಾರಂಭಕ್ಕೆ ಹಾಜರಾಗುತ್ತಿದ್ದರು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಬಿ. ಸರೋಜಾದೇವಿ, ಭಾರತಿ ವಿದ್ಯಾಭವನದ ನಿರ್ದೇಶಕ ಡಾ. ಎಚ್.ಎನ್. ಸುರೇಶ್, ನಟ ದೊಡ್ಡಣ್ಣ, ಶಿವರಾಂ, ರಾಜೇಂದ್ರಸಿಂಗ್ ಬಾಬು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News