ಸಾಹಿತಿಗಳು ನೀರಿನ ಸಮಸ್ಯೆ ಬಗ್ಗೆಯೂ ಬರೆಯಲಿ: ಸಚಿವ ವಿ.ಸೋಮಣ್ಣ

Update: 2019-11-17 15:59 GMT

ಬೆಂಗಳೂರು, ನ 17: ಕುಡಿಯುವ ನೀರಿನ ಸಮಸ್ಯೆ, ಪ್ರಕೃತಿಯನ್ನು ಕಡೆಗಣಿಸಿದರೆ ಎದುರಾಗಬಹುದಾದ ಅನಾಹುತಗಳ ಬಗ್ಗೆ ಮುಂದಿನ ಪೀಳಿಗೆ ಅರ್ಥ ಮಾಡಿಕೊಳ್ಳಲು ಸಣ್ಣ ಪುಸ್ತಕಗಳನ್ನು ಹೊರ ತರುವಂತೆ ಸಾಹಿತಿಗಳಿಗೆ ಸಚಿವ ವಿ. ಸೋಮಣ್ಣ ಮನವಿ ಮಾಡಿದರು.

ರವಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ರಮಣಶ್ರೀ ಪ್ರತಿಷ್ಠಾನ ಏರ್ಪಡಿಸಿದ್ದ 15ನೆ ವರ್ಷದ ರಮಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಕೃತಿ ಮುನಿದರೆ ಏನಾಗುತ್ತದೆ ಎಂಬ ಬಗ್ಗೆ ಇಂದು ಎಲ್ಲರಿಗೂ ಅರಿವಾಗಿದೆ. ಆದ್ದರಿಂದ ಪ್ರಕೃತಿಯನ್ನು ಕಾಪಾಡಿಕೊಳ್ಳಲು ಮುಂದಿನ ಪೀಳಿಗೆಗೆ ಅರ್ಥ ಮಾಡಿಸುವ ಅವಶ್ಯಕತೆ ಹೆಚ್ಚಾಗಿದೆ ಎಂದು ಹೇಳಿದ ಅವರು, ರಮಣಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದ ಸಚಿವ ಸುರೇಶ್ ಕುಮಾರ್ ಅವರು ಪ್ರಶಸ್ತಿಗಳನ್ನು ಆಯ್ಕೆ ಮಾಡುವಾಗ ಅರ್ಜಿಗಳನ್ನು ಕರೆಯುವುದಿಲ್ಲ. ಅದೇ ಮಾದರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳಿರಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಸಕ್ತ ಸಾಲಿನ ರಮಣಶ್ರೀ ಪ್ರಶಸ್ತಿಯನ್ನು ಡಾ. ಜಯಶ್ರೀ ದಂಡೆ, ಪ್ರೊ. ಸಿದ್ದಣ್ಣ ಲಂಗೋಟಿ, ದೇವೇಂದ್ರ ಕುಮಾರ್ ಡಾ.ಕೆ. ರೀವಿಂದ್ರನಾಥ್, ಪುಷ್ಪಾ ಬಸವರಾಜ ಬಣಕಾರ, ಪಾವನಿ ಕಾಶೀನಾಥ, ಪ್ರತೀಕ್ಷ ಕಾಶಿ ಅವರಿಗೆ ಪ್ರದಾನ ಮಾಡಲಾಯಿತು.

ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ, ನಿವೃತ್ತ ಅಧಿಕಾರಿ ಡಾ.ಸಿ.ಸೋಮಶೇಖರ್, ಪತ್ರಕರ್ತ ವಿಶ್ವೇಶ್ವರ ಭಟ್, ಶರಣ ಸಾಹಿತ್ಯ ಪರಿಷತ್ ಸಲಹೆಗಾರ ಡಾ.ಗೋರೂರು ಚನ್ನಬಸಪ್ಪ, ಪ್ರತಿಷ್ಠಾನದ ಎಸ್.ಕ್ಷಡಾಕ್ಷರಿ, ಪರಿಷತ್ ಅಧ್ಯಕ್ಷ ಅಪ್ಪಾರಾವ್ ಅಕೋಣೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News