ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಡಿಸಿಎಂ ಅಶ್ವತ್ಥನಾರಾಯಣ

Update: 2019-11-18 09:15 GMT

ಬೆಂಗಳೂರು : ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಎಲ್ಲ ಕ್ರಮಗಳ ಬಗ್ಗೆ ಗಮನ ಹರಿಸಲು "ಬೆಂಗಳೂರು ಟೆಕ್‌ ಸಮಿಟ್‌ 2019" ಅತ್ಯುತ್ತಮ ವೇದಿಕೆ.  ತಂತ್ರಜ್ಞರ ಸಲಹೆ, ಮಾರ್ಗದರ್ಶನದಲ್ಲಿ ಉದ್ದಿಮೆಗಳಿಗೆ ಪೂರಕ ವಾತಾವರಣ ಕಲ್ಪಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬದ್ಧ" ಎಂದು  ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಸೋಮವಾರ ತಿಳಿಸಿದರು.

ಬೆಂಗಳೂರು ಅರಮನೆಯಲ್ಲಿ ನ. 18ರಂದು  ಆರಂಭಗೊಂಡ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

"ತಂತ್ರಜ್ಞಾನ, ಡಿಜಿಟಲ್‌ ಕ್ರಾಂತಿಯ ಶಕ್ತಿಯನ್ನು ಸರ್ಕಾರ ಗುರುತಿಸಿ,  ಕ್ಷೇತ್ರದ ಬೆಳವಣಿಗೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.  ಬೆಂಗಳೂರು, ಕರ್ನಾಟಕ ಉದ್ದಿಮೆ ಸ್ನೇಹಿಯಾಗಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ  ಸಭೆಯಲ್ಲಷ್ಟೇ ಅಲ್ಲ, ಮುಂಬರುವ ದಿನಗಳಲ್ಲಿ  ಉದ್ದಿಮೆಗೆ ಪೂರಕವಾದ ಹಲವಾರು  ಘೋಷಣೆಗಳನ್ನು ಸರ್ಕಾರದಿಂದ ನಿರೀಕ್ಷಿಸಬಹುದು.  ಈಗಿರುವ ಉದ್ದಿಮೆಗಳ ಬಲವರ್ಧನೆ ಜತೆಗೆ ಹೊಸ ಹೊಸ ಉದ್ದಿಮೆಗಳ ಸ್ಥಾಪನೆ ಹಾಗೂ ಎದುರಾಗುವ ಸವಾಲುಗಳನ್ನು ನಿಭಾಯಿಸಿ ಮುಂದೆ ಸಾಗುವ ವಿಶ್ವಾಸ ನಮಗಿದೆ.  ಪರಸ್ಪರ ಸಹಕಾರ, ಪ್ರೀತಿ , ವಿಶ್ವಾಸದಲ್ಲಿ ಮುಂದುವರೆಯೋಣ," ಎಂದು ಉದ್ದಿಮೆ ನಾಯಕರಿಗೆ  ಸಭೆಯಲ್ಲಿ  ಸಚಿವರು ಭರವಸೆ ನೀಡಿದರು. 

ಸಿಲಿಕಾನ್‌ ಸಿಟಿಯ ಹೆಗ್ಗಳಿಕೆ

"ಬೆಂಗಳೂರು  ದೇಶದ ಸಿಲಿಕಾನ್‌ವ್ಯಾಲಿ ಸಿಟಿ ಎಂಬ ಹಣೆಪಟ್ಟಿ ಪಡೆಯಲು ಹಲವು ಅಂಶಗಳು ಪ್ರಮುಖ ಪಾತ್ರವಾಗಿವೆ.   ಹಿಂದಿನ ಸರ್ಕಾರಗಳು ತಂತ್ರಜ್ಞಾನ ಹಾಗೂ ಶಿಕ್ಷಣಕ್ಕೆ ಒತ್ತು ನೀಡಿದ್ದರ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಕರ್ನಾಟಕದ ರಾಜ ಮನೆತನಗಳ ಪಾತ್ರ ಮರೆಯುವಂತಿಲ್ಲ. ವಿಜಯನಗರ ಸಾಮ್ರಾಜ್ಯ ,ಮೈಸೂರು ಅರಸರ ಕೊಡುಗೆ ಅನನ್ಯ. ಒಡೆಯರ ಬೆಂಗಳೂರು ಅರಮನೆಯಲ್ಲಿ ಈ ಸಭೆ ನಡೆಯುತ್ತಿರುವುದು ವಿಶೇಷ.  ಮೈಸೂರು ಅರಸರು  ಶಿಕ್ಷಣ, ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ರಾಜ್ಯಕ್ಕೆ ಮೈಸೂರು ಒಡೆಯರು ನೀಡಿರುವ ಕೊಡುಗೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ನಮ್ಮ ನಾಡಿನ ಹೆಮ್ಮೆ.  ಸಂಸ್ಥೆ ಭಾರತ ರತ್ನ ಸರ್‌. ಎಂವಿ ವಿಶ್ವೇಶ್ವರಯ್ಯ, ಸರ್. ಸಿವಿ ರಾಮನ್‌,  ಭಾರತ ರತ್ನ ಪ್ರೊ. ಸಿ.ಎನ್‌.ಆರ್‌. ರಾವ್‌ ಮುಂತಾದ ಗಣ್ಯರನ್ನು ನಮಗೆ ಕೊಟ್ಟಿದೆ,"ಎಂದು ನಾಡಿನ ಭವ್ಯ ಪರಂಪರೆ ಮತ್ತು ಗಣ್ಯರನ್ನು ಸ್ಮರಿಸಿದರು.  

"1990ರ ದಶಕದಲ್ಲಿ ಐಟಿಬಿಟಿ ನಂತರದ ದಿನಗಳಲ್ಲಿ ಜಿಐಸಿ, ಈಗ ನವೋದ್ಯಮದಿಂದ ನಮ್ಮ ನಗರ ಹೆಸರುವಾಸಿ ಆಗಿದೆ.  ಶಿಕ್ಷಣ ಮತ್ತು ವಿಜ್ಞಾನಕ್ಕೆ  ನಮ್ಮ ಉದ್ಯಾನ ನಗರ ಮೊದಲಿನಿಂದಲೂ ಒತ್ತು ಕೊಟ್ಟಿದ್ದರಿಂದಲೇ ಸಿಲಿಕಾನ್‌ ಸಿಟಿ ಎಂಬ ಹೆಗ್ಗಳಿಕೆ ಪಡೆಯಲು ಸಾಧ್ಯವಾಗಿದೆ.  ಉದ್ದಿಮೆಗಳ ಬೆಳಗಣಿಗೆ ಹಾಗೂ ಹೂಡಿಕೆಗೆ ಉತ್ತಮ ವಾತಾವರಣ ಇರುವುದರಿಂದಲೇ   ಉಳಿದೆಲ್ಲ ನಗರಗಳಿಗಿಂತ ಬೆಂಗಳೂರು ಭಿನ್ನವಾಗಿದೆ. ಸಹಸ್ರಾರು ಕಂಪನಿಗಳ ತವರೂರಾಗಿರುವ ಬೆಂಗಳೂರು ಐಟಿ ಬಿಟಿ ರಫ್ತಿನಲ್ಲಿ ದೊಡ್ಡ ಹೆಸರು ಮಾಡಿದೆ.  ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಐಟಿ ಬಿಟಿ ವೃತ್ತಿಪರರಿದ್ದಾರೆ ಎನ್ನುವುದು ಗಮನಾರ್ಹ. ಟಾಪ್‌ ಗ್ಲೋಬಲ್‌ ಇನ್ನೋವೇಷನ್‌ ಹಬ್‌ನಲ್ಲಿ ಬೆಂಗಳೂರು 8ನೇ ಶ್ರೇಯಾಂಕ ಪಡೆದಿದ್ದರೆ,  ನವೋದ್ಯಮದಲ್ಲಿ  ನಗರ 11ನೇ ಸ್ಥಾನ ಪಡೆದುಕೊಂಡಿದೆ.  ಇದಲ್ಲದೇ, ನಗರದ ಹಲವು ಸಂಸ್ಥೆಗಳು ವಿಶ್ವಮಟ್ಟದಲ್ಲಿ  ಉನ್ನತ ಸ್ಥಾನಮಾನ ಪಡೆದುಕೊಂಡಿವೆ,"ಎಂದು ತಿಳಿಸಿದರು. 

ಅಭಿವೃದ್ಧಿಯ ಸಂಕಲ್ಪ

"ನಮ್ಮ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಹಿಂದಿನ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಯೋಜನೆಗಳನ್ನು ತಂದರು. 2011ರಲ್ಲಿ ಜಾರಿ ತಂದ  ಐಸಿಟಿ ನೀತಿಯಿಂದ,  ರಾಜ್ಯದ ಹಲವು ನಗರಗಳು ವಿಶೇಷವಾಗಿ ಉತ್ತರ ಕರ್ನಾಟಕದ ನಗರಗಳ ಅಭಿವೃದ್ಧಿ ಸಾಧ್ಯವಾಯಿತು.  ಜನರ ಆಶೀರ್ವಾದದಿಂದ ಮತ್ತೆ  ಅಧಿಕಾರಕ್ಕೆ ಬಂದಿರುವ ನಮ್ಮ ಸರ್ಕಾರ, ಈಗ ಐಟಿ- ಬಿಟಿ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದ್ದು, ಬೆಳವಣಿಗೆಗೆ  ಪೂರಕ ವಾತಾವರಣ ಕಲ್ಪಿಸುವುದು.  ಮೂಲ ಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆಯ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಚುರುಕುಗೊಳಿಸಿದ್ದು,  ಬೆಂಗಳೂರು ಮೆಟ್ರೊ ವಿಸ್ತರಣೆ, ಸಬ್‌ ಅರ್ಬನ್‌ ರೈಲು,  ಫೆರಿಪರಲ್‌ ರಿಂಗ್‌ ರಸ್ತೆ ಅಭಿವೃದ್ಧಿ ಅದಕ್ಕೆ ಉದಾಹರಣೆ. ಇಂಥ ಬೆಳವಣಿಗೆ ಕೇವಲ ಬೆಂಗಳೂರಿಗೆ ಸೀಮಿತವಾಗಿರದು, ಇಡೀ ರಾಜ್ಯವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುವ ದೃಢ ಸಂಕಲ್ಪ ನಮ್ಮದು,"ಎಂದರು.

ಜನ ನಾಯಕ, ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು  ಮುಂದೆ ನಿಂತು ಹಲವು ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ.  ಎಲ್ಲ ಕ್ಷೇತ್ರಗಳನ್ನು ತಲುಪುವ ಪ್ರಯತ್ನದ ಮೂಲಕ, ಬದಲಾವಣೆಯ ಹರಿಕಾರರಾಗಿದ್ದಾರೆ.  ಉದ್ಯಮಿಗಳು, ತಂತ್ರಜ್ಞರು ಅವರವರ ಕ್ಷೇತ್ರಗಳಲ್ಲಿ ಉನ್ನತ ಸಾಧನೆಗೆ ಅವರ ಪ್ರೋತ್ಸಾಹವಿದೆ.   ಅವರ ನಾಯಕತ್ವದಲ್ಲಿ ಬೆಂಗಳೂರು ತಂತ್ರಜ್ಞಾನ ಸಭೆ ಇಷ್ಟು ದೊಡ್ಡ ಮಟ್ಟದಲ್ಲಿ ಅತ್ಯುತ್ತಮ ರೀತಿಯಲ್ಲಿ ನಡೆಯುತ್ತಿದೆ.  ಅವರ ಅವಿರತ ಶ್ರಮದ ಫಲವೇ ಈ ಸಭೆ. ಈ ಸಂದರ್ಭದಲ್ಲಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಐಟಿ ಬಿಟಿ ಸಚಿವಾಲಯಕ್ಕೆ ಸಲಹೆ

"ಈ ಸಂಬಂಧ ಐಟಿ ಬಿಟಿ ಸಚಿವಾಲಯವೂ ಅಗತ್ಯ ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದು.  ನಿಮ್ಮ ಸಲಹೆಗಳು ಮುಂದಿನ ಸಭೆಯ ರೂಪುರೇಷೆ ಯನ್ನು ನಿರ್ಧರಿಸುವುದು. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ನಾಯಕರು ನಮ್ಮ ವಿಷನ್‌ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಅವರ ಮುಂದಾಳತ್ವ, ಅವರ ಮಾರ್ಗದರ್ಶನದಲ್ಲಿ ಮುಂದಡಿ  ಇಟ್ಟಿದ್ದೇವೆ.  ಅವರ ದೂರದೃಷ್ಟಿಯ ಫಲವಾಗಿ ಬೆಂಗಳೂರು ಉದ್ದಿಮೆಗಳಿಗೆ ಪ್ರಶಸ್ತ ನಗರವಾಗಿ ಹೊರಹೊಮ್ಮಲು ಸಾಧ್ಯವಾಗಿದೆ.  ಬೆಂಗಳೂರಿನ ಸಾಧನೆಗಳನ್ನು ಬಿಂಬಿಸಿದ ಮೋಹನ್‌ ದಾಸ್‌ ಪೈ ಹಾಗೂ ಎಲ್ಲ ಕ್ಷೇತ್ರಗಳ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ,'ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News