ಉಪಚುನಾವಣಾ ಕಣದಿಂದ ದೂರ ಉಳಿದ ಅನರ್ಹ ಶಾಸಕ ರೋಷನ್‌ ಬೇಗ್

Update: 2019-11-18 11:51 GMT

ಬೆಂಗಳೂರು, ನ. 18: ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿ ಶಿಸ್ತು ಕ್ರಮದ ಬಳಿಕ ಅನರ್ಹಗೊಂಡಿದ್ದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಆರ್.ರೋಷನ್ ಬೇಗ್ ಉಪಚುನಾವಣೆ ಕಣಕ್ಕಿಳಿಯದೆ ಇರುವುದು ಕುತೂಹಲ ಸೃಷ್ಟಿಸಿದೆ.

ಕೊನೆಯ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವ ಉಮೇದಿನಲ್ಲಿದ್ದ ರೋಷನ್‌ ಬೇಗ್, ಐಎಂಎ ಪ್ರಕರಣದ ಹಿನ್ನೆಲೆಯಲ್ಲಿ ಚುನಾವಣಾ ಕಣದಿಂದ ದೂರ ಉಳಿದಿದ್ದಾರೆ ಎನ್ನಲಾಗಿದ್ದು, ಬೇಗ್ ಅವರ ಮುಂದಿನ ರಾಜಕೀಯ ಭವಿಷ್ಯವೇನು ಎಂಬ ಪ್ರಶ್ನೆ ಹುಟ್ಟಹಾಕಿದೆ.

ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು (ನ.18) ಕೊನೆಯ ದಿನ. ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ರೋಷನ್ ಬೇಗ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರ ಅಭಿಮಾನಿಗಳು ಸೇರಿದಂತೆ ಎದುರಾಳಿಗಳು ನಿರೀಕ್ಷಿಸಿದ್ದರು. ಆದರೆ, ಅವರು ಕೊನೆಯ ಕ್ಷಣದಲ್ಲಿ ತಟಸ್ಥರಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಗ್ ಬದಲಾಗಿ ಪರಿಷತ್ ಸದಸ್ಯ ರಿಝ್ವನ್ ಅರ್ಶದ್‌ಗೆ ಟಿಕೆಟ್ ನೀಡಲಾಗಿತ್ತು. ತಾನು ಸಂಸದನಾಗಿ ಪುತ್ರ ಆರ್.ರುಮಾನ್ ಬೇಗ್ ಅವರನ್ನು ಶಾಸಕನಾಗಿ ಮಾಡುವ ಯೋಜನೆ ಕೈಗೂಡದ ಹಿನ್ನೆಲೆಯಲ್ಲಿ ಬೇಗ್ ಕಾಂಗ್ರೆಸ್ ವಿರುದ್ಧ ಬೇಸರಗೊಂಡಿದ್ದರು.

ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬೇಗ್, ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನಗಳನ್ನು ಅನುಭವಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರು ಕಾಂಗ್ರೆಸ್ ವಿರುದ್ಧವೇ ಸಮರ ಸಾರಿದ್ದರು.

ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬೇಗ್, ಕಾಂಗ್ರೆಸ್ ಪಕ್ಷದಿಂದಲೇ ಅಮಾನತುಗೊಂಡಿದ್ದರು.

ಇದೀಗ ಸುಪ್ರೀಂ ಕೋರ್ಟ್‌ನಿಂದ ಅನರ್ಹತೆ ಹಣೆಪಟ್ಟಿ ಹೊತ್ತಿರುವ ಆರ್. ರೋಷನ್‌ ಬೇಗ್ ಉಪಚುನಾವಣೆ ಕಣದಿಂದ ದೂರ ಉಳಿದಿದ್ದು, ಬಿಜೆಪಿ ಅಭ್ಯರ್ಥಿ ಶರವಣ ಅವರಿಗೆ ಪರೋಕ್ಷ ಬೆಂಬಲಿಸುವಂತೆ ತನ್ನ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ರೋಷನ್‌ ಬೇಗ್ ಅವರನ್ನು ನಾವು ಪಕ್ಷದಿಂದ ಹೊರಹಾಕಲಿಲ್ಲ. ಬದಲಿಗೆ ಅವರೇ ರಾಜೀನಾಮೆ ನೀಡಿ ಹೋಗಿದ್ದಾರೆ. ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಅವರಿಗೆ ಪಕ್ಷದಲ್ಲಿ ಒಳ್ಳೆಯ ಬೆಲೆಯೂ ಇತ್ತು. ಆದರೆ, ಅವರಿಗೆ ಟಿಕೆಟ್ ನೀಡದೆ ಬಿಜೆಪಿ ಅನ್ಯಾಯ ಮಾಡಿದೆ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News