ಬೆಂಗಳೂರು ಟೆಕ್ ಸಮ್ಮಿಟ್ ಗೆ ಚಾಲನೆ: ಅರಮನೆ ಮೈದಾನದಲ್ಲಿ ಅರಳಿದ ನೂತನ ಆವಿಷ್ಕಾರಗಳು

Update: 2019-11-18 12:08 GMT

ಬೆಂಗಳೂರು, ನ.18: ಕ್ರಿಯಾಶೀಲತೆ, ಪ್ರಯೋಗಶೀಲತೆ, ಕಲಾತ್ಮಕತೆಯನ್ನೇ ಉಪಯೋಗಿಸಿಕೊಂಡು ಸ್ವಂತ ಬಳಕೆಗೆ ಮಾತ್ರವಲ್ಲದೆ ಸಮುದಾಯ ಉಪಯೋಗಕ್ಕೂ ಪೂರಕವಾಗಿ ರೂಪುಗೊಂಡ ಸಾಲು ಸಾಲು ಉತ್ಪನ್ನ, ಸಾಧನಗಳು ಮೇಕರ್ ಫೇರ್‌ನಲ್ಲಿ (ಸ್ವ- ಉತ್ಪಾದಕರ ಮೇಳ) ಅನಾವರಣಗೊಂಡಿವೆ.

ಸೋಮವಾರದಿಂದ ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಸ್ಮಾರ್ಟ್ ಸಿಸಿ ಕ್ಯಾಮೆರಾ, ಶಿಕ್ಷಣಕ್ಕೆ ಅನುಕೂಲವಾಗುವ ರೋಬೋಟಿಕ್‌ಗಳು, ಕೃಷಿಯಲ್ಲಿ ಬಳಕೆ ಮಾಡುವ ಡ್ರೋನ್‌ಗಳು ಸೇರಿದಂತೆ ದೇಶ, ವಿದೇಶಗಳಿಂದ ಹಲವು ರೀತಿಯ ಆವಿಷ್ಕಾರಗಳು, ಪ್ರದರ್ಶನಗಳು ಗಮನ ಸೆಳೆದವು.

ಆರ್ಥಿಕ ಶಕ್ತಿಯಾಗಿ ಬೆಂಗಳೂರು: ಟೆಕ್ ಸಮ್ಮಿಟ್‌ಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬೆಂಗಳೂರನ್ನು ಮುಂದಿನ 2025ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕ ಶಕ್ತಿಯಾಗಿ ಬೆಳೆಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಸೇವಾ ವಲಯದಿಂದ ಉತ್ಪನ್ನಗಳ ಅಭಿವೃದ್ಧಿಯು ಬದಲಾವಣೆಯಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕರ್ನಾಟಕ ಬೆಳವಣಿಗೆಯಾಗುತ್ತಿದ್ದು, ರಾಜ್ಯದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ತಂತ್ರಜ್ಞಾನ ಬೆಳೆಯುತ್ತಿರುವ ಪೈಕಿ ಬೆಂಗಳೂರು ಒಂದಾಗಿದೆ. ಇತ್ತೀಚಿನ ವರದಿ ಪ್ರಕಾರ ಬೆಂಗಳೂರು ಜಾಗತಿಕವಾಗಿ 11ನೆ ಸ್ಥಾನ ಪಡೆದಿದೆ ಎಂದರು.

ತಂತ್ರಜ್ಞಾನದಲ್ಲಿ ಉದ್ಯಮಿಗಳಿಗೆ, ಕಾರ್ಪೋರೇಟ್ ಕಂಪೆನಿಗಳಿಗೆ, ಸ್ಟಾರ್ಟ್ ಅಪ್‌ಗಳಿಗೆ ಸಹಾಯ ನೀಡುವ ಸಲುವಾಗಿ ಸರಕಾರ ಖಾಸಗಿ ಸಂಸ್ಥೆಗಳೊಂದಿಗೆ ಒಂದೇ ವೇದಿಕೆಯನ್ನು ಸ್ಥಾಪಿಸಲಿದೆ. ಆರ್ ಅಂಡ್ ಡಿ ಮತ್ತು ಉದ್ಯಮದ ನಡುವೆ ಬಲಿಷ್ಠವಾದ ಸಹಭಾಗಿತ್ವವನ್ನು ಬೆಸೆಯಲು ವಿಶ್ವದ ಪ್ರಮುಖ ಕಂಪೆನಿಗಳೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರಸಕ್ತ ಸಾಲಿನ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಸುಮಾರು 22 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಇಲ್ಲಿಗೆ ಆಗಮಿಸಿರುವ ವಿವಿಧ ದೇಶಗಳ ರಾಯಭಾರಿಗಳು, ಪ್ರತಿನಿಧಿಗಳು ಮುಂದಿನ ದಿನಗಳಲ್ಲಿ ಇಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಸಹಕಾರಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ, ತಂತ್ರಜ್ಞಾನ ಇಲಾಖೆ ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ವತಿಯಿಂದ ಸಮ್ಮೇಳನವನ್ನು ಆಯೋಜನೆ ಮಾಡಲಾಗಿದೆ. ಈ ಸಮ್ಮೇಳನದಲ್ಲಿ ಜಾಗತಿಕ ಮಟ್ಟದ ಕಂಪನಿಗಳಿಗೆ ಆಹ್ವಾನ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ಕೊಡಲಾಗುತ್ತದೆ.

ಮೂರು ದಿನಗಳ ಸಮ್ಮೇಳನದಲ್ಲಿ 20ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳಲಿವೆ. 3,500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 200 ಉಪನ್ಯಾಸಕರು, 36 ಚರ್ಚಾಗೋಷ್ಠಿ, 200ಕ್ಕೂ ಹೆಚ್ಚಿನ ಪ್ರದರ್ಶಕರು ಆಗಮಿಸಿ ಐಟಿ-ಬಿಟಿ ಕ್ಷೇತ್ರದ ಬಗೆಗಿನ ಮಾಹಿತಿ ನೀಡಲಿದ್ದಾರೆ ಮತ್ತು ಪಡೆದುಕೊಳ್ಳಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗಿದೆ.

ಸಭೆಗಳು: ಸಮ್ಮೇಳನದಲ್ಲಿ ಪ್ರತಿಷ್ಠಿತ ಕಂಪನಿಗಳ ಸಿಇಒಗಳ ದುಂಡು ಮೇಜಿನ ಸಭೆ ನಡೆಯಲಿದೆ. ಆಯ್ದ ಉದ್ಯಮ ಕ್ಷೇತ್ರದಲ್ಲಿನ ಅವಕಾಶಗಳು, ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ನಾನಾ ಕ್ಷೇತ್ರದ ತಾಂತ್ರಿಕ ತಜ್ಞರು, ಸಂಶೋಧಕರು, ಹೂಡಿಕೆದಾರರು, ನೀತಿ ನಿರೂಪಕರು ಒಂದೇ ವೇದಿಕೆಯಲ್ಲಿ ಸಂವಾದ ನಡೆಸಲಿದ್ದಾರೆ.

ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಸರಕಾರದ ಮುಖ್ಯ ಕಾರ್ಯದರ್ಶಿ ಬಿ.ಎಂ.ವಿಜಯ್ ಭಾಸ್ಕರ್, ಬ್ರಿಟಿಷ್ ಹೈ ಕಮೀಷನರ್ ಸರ್ ಡೋಮಿನಿಕ್ ಅಂಥೋನಿ ಜೆರಾರ್ಡ್ ಅಸ್ಕ್ವಿತ್, ಆಸ್ಟ್ರೇಲಿಯಾ ಹೈ ಕಮೀಷನರ್ ಹರಿಂದರ್ ಸಿಧು, ಭಾರತ, ನೇಪಾಳ, ಭೂತಾನ್‌ಗಳಿಗೆ ನೆದರ್ ಲ್ಯಾಂಡ್ ರಾಯಭಾರಿ ಮಾರ್ಟನ್ ವ್ಯಾನ್ ಡೆನ್ ಬರ್ಗ್ ಸೇರಿದಂತೆ ರಾಜ್ಯ ಹಾಗೂ ದೇಶದ ವಿವಿಧ ಕಂಪೆನಿಗಳ ಸಿಇಒಗಳು ಉಪಸ್ಥಿತರಿದ್ದರು.

ತಂತ್ರಜ್ಞಾನ ಅಭಿವೃದ್ಧಿ ಮಂಡಳಿ

‘ರಾಜ್ಯದಲ್ಲಿ ಐಟಿ ಮತ್ತು ವಿಜ್ಞಾನ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಕೆಟಿಡಿಬಿ) ಸ್ಥಾಪನೆ ಮಾಡಲು ಚಿಂತನೆ ನಡೆಸಿದೆ. ಇದು ಹೂಡಿಕೆ ಉತ್ತೇಜನ, ಕೈಗಾರಿಕಾ ಅಭಿವೃದ್ಧಿ ಮತ್ತು ವಿಶಾಲ ತಂತ್ರಜ್ಞಾನ ಕ್ಷೇತ್ರದ ಮಾನವಶಕ್ತಿ ಅಭಿವೃದ್ಧಿಯ ಗುರಿ ಹೊಂದಲಾಗಿದೆ. ಕೈಗಾರಿಕಾ ಸ್ನೇಹಿ ಕಾನೂನುಗಳನ್ನು ತರಲು ಉದ್ದೇಶಿಸಲಾಗಿದೆ’

- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News