ಬೇಡಿಕೆ ಈಡೇರುವವರೆಗೆ ಪ್ರತಿಭಟನೆ: ಜೆಎನ್‌ಯು ವಿದ್ಯಾರ್ಥಿಗಳ ನಿರ್ಧಾರ

Update: 2019-11-20 18:15 GMT
PTI

   ಹೊಸದಿಲ್ಲಿ, ನ.20: ಬುಧವಾರ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸಮಿತಿಯನ್ನು ಭೇಟಿ ಮಾಡಿ ಪೊಲೀಸರ ಅಮಾನುಷ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದು ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿಗಳ ನಿಯೋಗ ತಿಳಿಸಿದೆ.

ಉಪಕುಲಪತಿಯನ್ನು ಭೇಟಿಯಾಗಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆಯಾಗಿದೆ. ಅಲ್ಲದೆ ವಿದ್ಯಾರ್ಥಿಗಳೊಂದಿಗೆ ಅಮಾನುಷವಾಗಿ ವರ್ತಿಸಿ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ತಿಳಿಸಿದ್ದೇವೆ. ನಮ್ಮ ಹೇಳಿಕೆಯನ್ನು ಅಧಿಕಾರಿಗಳ ಸಮಿತಿ ತಾಳ್ಮೆಯಿಂದ ಆಲಿಸಿದೆ ಎಂದು ವಿದ್ಯಾರ್ಥಿಗಳ ನಿಯೋಗ ಹೇಳಿದೆ.

  ವಿದ್ಯಾರ್ಥಿಗಳ ಯಾವುದೇ ಬೇಡಿಕೆ ಅಥವಾ ಸಮಸ್ಯೆಯ ಬಗ್ಗೆ ವಿವಿಯ ಉಪಕುಲಪತಿ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳ ನಿಯೋಗ ಅಸಮಾಧಾನ ವ್ಯಕ್ತಪಡಿಸಿದೆ. ಹಾಸ್ಟೆಲ್ ಶುಲ್ಕ ಏರಿಕೆ , ವಸ್ತ್ರಸಂಹಿತೆ ಹಾಗೂ ಇತರ ನಿರ್ಧಾರವನ್ನು ವಿರೋಧಿಸಿ ಸುಮಾರು 3 ವಾರಗಳಿಂದ ಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸಂಸದ್ ಭವನದತ್ತ ರ್ಯಾಲಿ ತೆರಳಲು ಮುಂದಾದಾಗ ಪೊಲೀಸರು ಲಾಠಿಚಾರ್ಜ್ ಮಾಡಿ ಚದುರಿಸಿದ್ದರು.

 ಈ ಮಧ್ಯೆ, ಜೆಎನ್‌ಯು ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಸೂತ್ರವನ್ನು ರೂಪಿಸಲು ಸೋಮವಾರ ಮಾನವ ಸಂಪನ್ಮೂಲ ಇಲಾಖೆಯು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದು ಸಮಿತಿಯು ವಿದ್ಯಾರ್ಥಿ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News