ಜೆಡಿಎಸ್ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ಸಿಎಂ ಪುತ್ರನ ನಾಯಕತ್ವ: ದೇವೇಗೌಡ ಆರೋಪ

Update: 2019-11-21 13:54 GMT

ಬೆಂಗಳೂರು, ನ.21: ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ನಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಸಂಸದ ಬಿ.ವೈ.ರಾಘವೇಂದ್ರ ನಾಯಕತ್ವದಲ್ಲಿ ಒತ್ತಡ ಹೇರಲಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ನಗರದ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಥಣಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರು ದಾಸ್ಯಾಳ ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಿವಾಚಾರ್ಯ ಶಿವಲಿಂಗ ಸ್ವಾಮೀಜಿ ಮೇಲೆ ಒತ್ತಡ ಹೇರಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದರು.

ದೇಶದಲ್ಲಿ ಅನೇಕ ಕಡೆ ಚುನಾವಣೆಯಲ್ಲಿ ಗೆದ್ದು ಸ್ವಾಮೀಜಿಗಳು ಸಂಸತ್ ಪ್ರದೇಶ ಮಾಡಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಕಬ್ಬಿಣದ ಕಂಠಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಚುನಾವಣಾ ಕಣಕ್ಕೆ ಇಳಿದಿದ್ದೇ ದೊಡ್ಡ ಅನಾಹುತವಾದಂತೆ ಬಿಂಬಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಶಿವಾಚಾರ್ಯ ಸ್ವಾಮೀಜಿಯನ್ನು ನಾವು ಚುನಾವಣೆಗೆ ನಿಲ್ಲಿಸಿರಲಿಲ್ಲ. ಅವರೇ ಬಂದು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರಿಂದ, ಬಿ-ಫಾರಂ ಕೊಟ್ಟಿದ್ದೆವು. ಅವರು ನಾಮಪತ್ರ ಹಿಂಪಡೆಯುವಂತೆ ರಾಘವೇಂದ್ರ ನೇತೃತ್ವದಲ್ಲಿ ವಿವಿಧ ಮಠಾಧೀಶರು ಮಾನಸಿಕ ಒತ್ತಡ ಹೇರಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದು ಅವರು ಹೇಳಿದರು.

ಉಪ ಚುನಾವಣೆ ನಡೆಯುತ್ತಿರುವ 12 ಕ್ಷೇತ್ರಗಳಲ್ಲೂ ನಾನು ನಮ್ಮ ಅಭ್ಯರ್ಥಿಗಳ ಪರವಾಗಿ ನಾಳೆಯಿಂದಲೇ ಪ್ರಚಾರ ಮಾಡುತ್ತೇನೆ. ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ. ಜೆಡಿಎಸ್ ಪಕ್ಷವನ್ನು ದುರ್ಬಲವಾಗಲು ಬಿಡುವುದಿಲ್ಲ ಎಂದು ದೇವೇಗೌಡ ಹೇಳಿದರು.

ಬಿಜೆಪಿ ಜೊತೆ ನಾವು ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಕೆಲವು ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ವೇಳೆ ನಾವು ಒಳ ಒಪ್ಪಂದ ಮಾಡಿಕೊಂಡಿದ್ದರೆ, ನಮ್ಮ ಅಭ್ಯರ್ಥಿಗಳನ್ನು ಯಾಕೆ ಕಣಕ್ಕಿಳಿಸುತ್ತಿದ್ದೆವು. ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ನೇರ ಪೈಪೋಟಿ ಮಾಡುತ್ತೇವೆ. ತೀರ್ಪು ಕೊಡುವುದು ಮತದಾರರು ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಾಂತರಿಗಳನ್ನು ಮತದಾರರು ಸೋಲಿಸಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಶಾಸಕರ ಕುದುರೆ ವ್ಯಾಪಾರ ಆಗಿರುವುದು ಜನತೆಗೆ ಗೊತ್ತಿದೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ನಮ್ಮ ಕಾರ್ಯಕರ್ತರು ಚಪ್ಪಲಿಯಲ್ಲಿ ಹೊಡೆದರು ಎಂದು ಆರೋಪಿಸುತ್ತಿದ್ದಾರೆ. ಅಂದು ನಮ್ಮ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಅಲ್ಲಿ ಸೇರಿದ್ದರು. ಅದು ಬಿಜೆಪಿಯವರಿಗೆ ಇಷ್ಟವಾಗಲಿಲ್ಲವೆಂದು ಕಾಣುತ್ತದೆ ಎಂದು ಅವರು ತಿಳಿಸಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ನಮ್ಮ ಪಕ್ಷದಲ್ಲಿ ಇದ್ದಾಗ ಹೇಗಿದ್ದರು? ನಾವು ಅವರಿಗೆ ಏನು ಅನ್ಯಾಯ ಮಾಡಿದ್ದೇವೆ? ಅವರ ಪತ್ನಿಯನ್ನು ಉಪಮೇಯರ್ ಮಾಡಲಿಲ್ಲವೇ? ಜಾತಿಯ ಆಧಾರದಲ್ಲಿ ಪಕ್ಷ ಕಟ್ಟುವುದಾಗಿದ್ದರೆ ಈ ಪಕ್ಷಕ್ಕೆ ಜಾತ್ಯತೀತ ಜನತಾದಳ ಎಂದು ನಾಮಕರಣ ಮಾಡುವ ಅಗತ್ಯವಿರುತ್ತಿರಲಿಲ್ಲ ಎಂದು ದೇವೇಗೌಡ ಹೇಳಿದರು.

ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಮ್ಮ ಅಭ್ಯರ್ಥಿ ಗಿರೀಶ್ ನಾಶಿ ಮನೆ ಮುಂದೆ ಇದ್ದ ಪೋಸ್ಟರ್‌ಗಳನ್ನು ಕೀಳಿಸಿದ್ದಾರೆ. ಇವರ ಬೆದರಿಕೆಯಿಂದ ನಮ್ಮ ಅಭ್ಯರ್ಥಿ ಓಡಿ ಹೋಗುವುದಿಲ್ಲ. ಪೋಸ್ಟರ್‌ಗಳನ್ನು ಯಾರು ಕೀಳಿಸಿದ್ದಾರೆ ಅನ್ನೋದು ಗೊತ್ತಿದೆ. ಇದನ್ನು ಸವಾಲಾಗಿ ಸ್ವೀಕಾರ ಮಾಡಿದ್ದೇನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News