ಹಣದ ಆಮಿಷವೊಡ್ಡಿ ಎಂಟಿಬಿ ಮತಯಾಚನೆ: ಶರತ್ ಬಚ್ಚೇಗೌಡ ಆರೋಪ

Update: 2019-11-21 14:35 GMT

ಬೆಂಗಳೂರು, ನ.21: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಹಣದ ಆಮಿಷವೊಡ್ಡುವ ಮೂಲಕ ಮತಯಾಚನೆ ಮಾಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ.

ಗುರುವಾರ ಹೊಸಕೋಟೆಯಲ್ಲಿರುವ ತಮ್ಮ ಚುನಾವಣಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಂಟಿಬಿ ನಾಗರಾಜ್ ಎಲ್ಲ ರೀತಿ ತಂತ್ರ, ಕುತಂತ್ರಗಳನ್ನು ಹಣೆಯುತ್ತಿದ್ದಾರೆ ಎಂದು ದೂರಿದರು.

ನನ್ನ ತಂದೆ ಸಂಸದ ಬಿ.ಎನ್.ಬಚ್ಚೇಗೌಡರು ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ನೇರ ನುಡಿಯಿಂದ ಬದುಕಿದವರು. ಅವರು ಈವರೆಗೆ ಯಾರಿಗೂ ಮೋಸ, ವಂಚನೆ ಮಾಡಿಲ್ಲ. ನಮ್ಮ ಕೈ ಹಿಡಿದಿರುವ ಕ್ಷೇತ್ರದ ಜನರನ್ನು ಎಂದಿಗೂ ದಾರಿ ತಪ್ಪಿಸುವ ಕೆಲಸವನ್ನು ಮಾಡಿಲ್ಲ ಎಂದು ಅವರು ಹೇಳಿದರು.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಜೊತೆ ನಮಗೆ ಹಲವಾರು ವರ್ಷಗಳ ಒಡನಾಟವಿದೆ. ನಮ್ಮನ್ನು ನಂಬಿರುವ ಜನರಿಗಾಗಿ ನನ್ನ ತಂದೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ನುಡಿದಂತೆ ನಾವು ಬದುಕಿದ್ದೇವೆ. ಆದುದರಿಂದ, ಈ ಬಾರಿ ಜನ ನಮ್ಮ ಕೈ ಬಿಡುವುದಿಲ್ಲ ಎಂಬ ನಂಬಿಕೆಯಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.

ನನ್ನ ಜೊತೆ ಬಂದು ಯಾರೇ ಬಂದು ಪ್ರಚಾರ ಮಾಡಿದರೂ ನಾವು ಸ್ವಾಗತಿಸುತ್ತೇವೆ. ರಾಜ್ಯದ ವಿವಿಧ ಭಾಗಗಳಿಂದ ಜನ ಹೊಸಕೋಟೆಗೆ ಬಂದು ನನ್ನ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿಯಿದ್ದು ನಾವು ಕ್ಷೇತ್ರದ ಪ್ರತಿಯೊಬ್ಬ ಮತದಾರನ ಬಳಿ ತಲುಪಬೇಕಿದೆ ಎಂದು ಅವರು ಹೇಳಿದರು.

ಕುಕ್ಕರ್ ಚಿಹ್ನೆ ಹಂಚಿಕೆ: ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು ಶರತ್ ಬಚ್ಚೇಗೌಡ ಕಣದಲ್ಲಿ ಮುಂದುವರೆದಿರುವುದರಿಂದ ಚುನಾವಣಾ ಆಯೋಗವು ಅವರಿಗೆ ಕ್ರಮ ಸಂಖ್ಯೆ 15 ಹಾಗೂ ಕುಕ್ಕರ್ ಚಿಹ್ನೆಯನ್ನು ಹಂಚಿಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News