ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ?: ಬಿಜೆಪಿ ಮುಖಂಡರಿಗೆ ಸಿದ್ದರಾಮಯ್ಯ ಪ್ರಶ್ನೆ

Update: 2019-11-22 11:54 GMT

ಬೆಂಗಳೂರು, ನ. 22: ‘ರಾಜ್ಯದ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿಬೀಳುತ್ತಿರುವುದು ನೋಡಿದರೆ, ನನ್ನನ್ನು ಅತಿಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡ್ತೇವೆ ಎಂದು ಮೋದಿ ಮತ್ತು ಅಮಿತ್ ಶಾ ಭರವಸೆ ನೀಡಿದ ಹಾಗಿದೆ. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ?’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ನನ್ನ ಮಾನಸಿಕ ಸ್ಥಿತಿ ಬಗ್ಗೆ ಬಡಬಡಿಸುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬಗ್ಗೆ ಅನುಕಂಪ ಇದೆ. ಮೊದಲು ಮುಖ್ಯಮಂತ್ರಿ ಸ್ಥಾನದಿಂದ ನಂತರ ರೈಲ್ವೆ, ಕಾನೂನು, ಅಂಕಿ ಅಂಶ ಹೀಗೆ ಎಲ್ಲ ಕಡೆಗಳಲ್ಲಿಯೂ ತಿರಸ್ಕೃತಗೊಂಡ ಗೌಡರು ಈಗ ಪಕ್ಷದಲ್ಲಿ ‘ಗೊಬ್ಬರ’ವಾಗಿ ಹೋಗಿದ್ದಾರೆ. ಈ ಹತಾಶೆ ಅವರಿಂದ ಇಂತಹ ಹೇಳಿಕೆಗಳನ್ನು ಹೊರಡಿಸುತ್ತಿದೆ’ ಎಂದು ಟೀಕಿಸಿದ್ದಾರೆ.

‘ಏಕಾಂಗಿಯಾಗಿ ಹೋಗಿರುವ ಡಿ.ವಿ.ಸದಾನಂದಗೌಡ ಅವರನ್ನು ಬಿಜೆಪಿಯಲ್ಲಿ ಯಾರೂ ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಇದಕ್ಕಾಗಿ ಅವರು ತಮ್ಮ ಜೋಕುಗಳಿಗೆ ತಾವೇ ನಕ್ಕು ರಾಜ್ಯದ ಜನರಿಗೆ ಮನರಂಜನೆ ನೀಡುತ್ತಾ ಇರುತ್ತಾರೆ’ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

‘ಯಶವಂತಪುರ ಕ್ಷೇತ್ರದಲ್ಲಿಂದು ಆಯೋಜಿಸಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದೆ. ಸುಪ್ರೀಂ ಕೋರ್ಟ್ ಅನರ್ಹರು ಎಂದು ತೀರ್ಪು ನೀಡಿದವರನ್ನು ಜನತೆ ಮತ ನೀಡಿ ಗೆಲ್ಲಿಸಿದರೆ ಅದು ಅಭ್ಯರ್ಥಿಯ ಗೆಲುವಲ್ಲ, ನಂಬಿಕೆ ದ್ರೋಹ, ಸ್ವಾರ್ಥದ ಗೆಲುವಾಗುತ್ತದೆ. ಮತ ನೀಡುವಾಗ ಈ ವಿಚಾರವನ್ನು ಜನತೆ ಗಮನದಲ್ಲಿಟ್ಟುಕೊಂಡು ಮತ ನೀಡಬೇಕು’ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಪಿಎಫ್‌ಐ ಸಮರ್ಥಕ: ‘ವೃಕ್ಷಕೆಲ್ಲಿಯದು ಹೂವಿನ ಹಬ್ಬ? ಗೊಬ್ಬರದ ಜೀವವನೆ ಹೀರಿ ಕೊಬ್ಬಿಹ ಹೂವೆ, ಕಬ್ಬಕ್ಕೆ ನೀಂ ಮಾತ್ರ ವಸ್ತುವೇಂ? ನಿನ್ನಂತೆ ಗೊಬ್ಬರಂ ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು? ಹಳಿಯದಿರೊ; ಇಂದೊ ನಾಳೆಯೊ ನೀನು ಕೆಳಗುರುಳಿ ಗೊಬ್ಬರದೊಳೊಂದಾಗುವಾ ಮುಂದೆ ಕಾದಿಹುದು’ ಎಂದು ಕುವೆಂಪು ಕಾವ್ಯ ಉಲ್ಲೇಖಿಸಿ ಸದಾನಂದಗೌಡ ತಿರುಗೇಟು ನೀಡಿದ್ದಾರೆ.

‘ನಾನು ಗೊಬ್ಬರ ಹೌದು ಸ್ವಪಕ್ಷೀಯರ ರಕ್ತ ಹೀರಿದ ಪಿಎಫ್‌ಐನ ಸಮರ್ಥಕ ನೀವಲ್ಲವೇ? ನಾವು ತಿನ್ನುವ ಅನ್ನ ಗೊಬ್ಬರದಿಂದಲೇ.. ಗೊಬ್ಬರವನ್ನು ಹೀಯಾಳಿಸುವ ಮೂಲಕ ರೈತರನ್ನು ಕೇವಲವಾಗಿ ಕಂಡಿದ್ದೀರಿ. ಪ್ರಚಾರಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡುವುದು ಸಮತೋಲನವಿಲ್ಲದ ತಮ್ಮ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಡಿವಿಎಸ್ ಟ್ವೀಟ್ ಮೂಲಕ ಸಿದ್ದರಾಮಯ್ಯರನ್ನು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News