BIG BREAKING NEWS| ಮಹಾ ಅಚ್ಚರಿ: ಮಹಾರಾಷ್ಟ್ರ ಸಿಎಂ ಆಗಿ ಫಡ್ನವೀಸ್, ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ

Update: 2019-11-23 18:00 GMT
PTI

ಮುಂಬೈ, ನ.23: ಮಹಾರಾಷ್ಟ್ರದಲ್ಲಿ ಸುಮಾರು 1 ತಿಂಗಳಿನಿಂದ ಮುಂದುವರಿದಿದ್ದ ರಾಜಕೀಯ ಬಿಕ್ಕಟ್ಟಿಗೆ ಶನಿವಾರ ನಾಟಕೀಯ ತಿರುವು ದೊರಕಿದ್ದು, ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತೆ ಮುಖ್ಯಮಂತ್ರಿಯಾಗಿ , ಎನ್‌ಸಿಪಿ ಮುಖಂಡ ಶರದ್‌ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಶನಿವಾರ ಬೆಳಿಗ್ಗೆ 7:30ಕ್ಕೆ ರಾಜಭವನದಲ್ಲಿ ತರಾತುರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಡ್ನವೀಸ್ ಹಾಗೂ ಅಜಿತ್ ಪವಾರ್‌ಗೆ ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ನವೆಂಬರ್ 29ರೊಳಗೆ ಬಹುಮತ ಸಾಬೀತುಪಡಿಸುವಂತೆ ಫಡ್ನವೀಸ್‌ಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಫಡ್ನವೀಸ್, ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯ ಜನಾದೇಶಕ್ಕೆ ಶಿವಸೇನೆ ಅಗೌರವ ತೋರಿದೆ ಎಂದು ಆರೋಪಿಸಿದರು. ಜನತೆ ನಮಗೆ ಸ್ಪಷ್ಟ ಜನಾದೇಶ ನೀಡಿದ್ದರು. ಆದರೆ ಫಲಿತಾಂಶ ಪ್ರಕಟವಾದ ಬಳಿಕ ಶಿವಸೇನೆ ಇತರ ಪಕ್ಷಗಳ ಜೊತೆ ಸೇರಿ ಮೈತ್ರಿಗೆ ಮುಂದಾದ ಕಾರಣ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಮಹಾರಾಷ್ಟ್ರಕ್ಕೆ ಕಿಚಡಿ ಸರಕಾರದ ಅಗತ್ಯವಿಲ್ಲ , ಸ್ಥಿರ ಸರಕಾರ ಬೇಕು ಎಂಬ ಉದ್ದೇಶದಿಂದ ಅಜಿತ್ ಪವಾರ್ ಬಿಜೆಪಿಯನ್ನು ಬೆಂಬಲಿಸಿದರು ಹಾಗೂ ಪಕ್ಷೇತರ ಶಾಸಕರು ಮತ್ತು ಇತರ ಸಣ್ಣಪಕ್ಷಗಳ ಬೆಂಬಲದಿಂದ ಅಧಿಕಾರ ರಚಿಸಲು ಬಿಜೆಪಿ ನಿರ್ಧರಿಸಿತು ಎಂದು ಫಡ್ನವೀಸ್ ಹೇಳಿದರು. ರಾಜ್ಯದ ಜನತೆಗೆ ಸೇವೆ ಸಲ್ಲಿಸಲು ಎರಡನೇ ಬಾರಿ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಪಕ್ಷಾಧ್ಯಕ್ಷ ಅಮಿತ್ ಶಾ ಮತ್ತು ಜೆಪಿ ನಡ್ಡಾರನ್ನು ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅಜಿತ್ ಪವಾರ್, ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾದಂದಿನಿಂದಲೂ ಯಾವುದೇ ಪಕ್ಷ ಸರಕಾರ ರಚಿಸಲು ಶಕ್ತವಾಗಲಿಲ್ಲ. ಮಹಾರಾಷ್ಟ್ರವು ರೈತರ ಸಮಸ್ಯೆ ಸಹಿತ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಿರ ಸರಕಾರ ರಚಿಸಬೇಕೆಂದು ನಾವು ನಿರ್ಧರಿಸಿದೆವು ಎಂದು ಹೇಳಿದರು.

ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ನೂತನ ಸರಕಾರದ ನೇತೃತ್ವ ವಹಿಸಬೇಕೆಂದು ಎನ್‌ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆಯ ಮಧ್ಯೆ ಒಮ್ಮತ ಮೂಡಿದೆ ಎಂದು ಗುರುವಾರ ರಾತ್ರಿ ಎನ್‌ಸಿಪಿ ಮುಖಂಡ ಶರದ್‌ಪವಾರ್ ಹೇಳಿಕೆ ನೀಡಿದ್ದರು. ಈ ಮಧ್ಯೆ, ಶುಕ್ರವಾರ ರಾತ್ರಿ ಆರಂಭವಾದ ನಾಟಕೀಯ ವಿದ್ಯಮಾನದ ಹಿಂದೆ ಶರದ್‌ಪವಾರ್ ಅವರ ರಾಜಕೀಯ ಲೆಕ್ಕಾಚಾರ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

 ಆದರೆ ಎನ್‌ಸಿಪಿಯ ಎಲ್ಲಾ 54 ಶಾಸಕರೂ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆಯೇ ಅಥವಾ ಆ ಪಕ್ಷ ಹೋಳಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪ್ರಮಾಣವಚನ ಕಾರ್ಯಕ್ರಮ ಮುಗಿದೊಡನೆ ಫಡ್ನವೀಸ್ ಮತ್ತು ಅಜಿತ್ ಪವಾರ್‌ಗೆ ಅಭಿನಂದನೆ ಸಲ್ಲಿಸಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಅಜಿತ್ ಪವಾರ್ ನಿರ್ಧಾರ ವೈಯಕ್ತಿಕ : ಶರದ್ ಪವಾರ್

 ಬಿಜೆಪಿಯನ್ನು ಬೆಂಬಲಿಸುವ ಅಜಿತ್ ಪವಾರ್ ನಿರ್ಧಾರ ವೈಯಕ್ತಿಕ. ಎನ್‌ಸಿಪಿ ಈಗಲೂ ಶಿವಸೇನೆ ನೇತೃತ್ವದ, ಕಾಂಗ್ರೆಸ್ ಕೂಡಾ ಇರುವ ಮೈತ್ರಿಕೂಟವನ್ನು ಬೆಂಬಲಿಸುತ್ತದೆ . ಶನಿವಾರ ಬೆಳಿಗ್ಗೆ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕೆಲವು ಎನ್‌ಸಿಪಿ ಶಾಸಕರೂ ಪಾಲ್ಗೊಂಡು ಮೋಸ ಮಾಡಿದ್ದಾರೆ ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.

ಶಿವಸೇನೆ ನೇತೃತ್ವದ ಮೈತ್ರಿಕೂಟಕ್ಕೆ ಎನ್‌ಸಿಪಿ ಶಾಸಕರ ಬೆಂಬಲ ಇರುವ ಪತ್ರವನ್ನು , ಎನ್‌ಸಿಪಿಯು ಬಿಜೆಪಿಯನ್ನು ಬೆಂಬಲಿಸುತ್ತದೆ ಎಂಬ ರೀತಿಯಲ್ಲಿ ಅಜಿತ್ ಪವಾರ್ ರಾಜ್ಯಪಾಲರ ಮುಂದೆ ಪ್ರಸ್ತುತಪಡಿಸಿದ್ದಾರೆ ಎಂದು ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಜೊತೆ ನಡೆಸಿದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಪವಾರ್ ಹೇಳಿದ್ದಾರೆ.

ಬಿಜೆಪಿ ಸರಕಾರ ಬಹುಮತ ಸಾಬೀತುಪಡಿಸಲು ಖಂಡಿತಾ ಸಫಲವಾಗುವುದಿಲ್ಲ. ಬಳಿಕ ಈ ಹಿಂದೆ ನಿರ್ಧರಿಸಿರುವಂತೆಯೇ ಮೂರು ಪಕ್ಷಗಳು ಸೇರಿ ಸರಕಾರ ರಚಿಸುತ್ತವೆ ಎಂದು ಪವಾರ್ ಹೇಳಿದರು.

ರಾಜಭವನಕ್ಕೆ ಬರುವಂತೆ ಅಜಿತ್ ಪವಾರ್ ಕರೆ ಮಾಡಿದರು. ಅವರ ನಡೆ ಪಕ್ಷದ ನಿಲುವಿಗೆ ವಿರುದ್ಧವಾಗಿದೆ ಎಂಬುದು ನಮಗೆ ಬಳಿಕ ತಿಳಿಯಿತು ಎಂದು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ‘ಬಂಡಾಯ ಶಾಸಕ’ ತಿಳಿಸಿದ್ದಾರೆ. ಅಲ್ಲಿ ಏನು ನಡೆಯುತ್ತದೆ ಎಂಬ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ. ಅಲ್ಲಿಗೆ ಹೋದ ಬಳಿಕವಷ್ಟೇ ಅದು ಪ್ರಮಾಣವಚನ ಕಾರ್ಯಕ್ರಮ ಎಂಬುದು ತಿಳಿಯಿತು ಎಂದು ಮತ್ತೊಬ್ಬ ‘ಬಂಡಾಯ ಶಾಸಕ’ ಹೇಳಿದ್ದಾರೆ.

ಶಾಸಕಾಂಗ ಪಕ್ಷ ಅಧ್ಯಕ್ಷತೆಯಿಂದ ಅಜಿತ್ ಪವಾರ್ ವಜಾ

ಅಜಿತ್ ಪವಾರ್‌ರನ್ನು ಎನ್‌ಸಿಪಿ ಶಾಸಕಾಂಗ ಪಕ್ಷದ ಮುಖಂಡರ ಹುದ್ದೆಯಿಂದ ತೆಗೆದುಹಾಕಲಾಗಿದೆ. ಅವರನ್ನು ಪಕ್ಷದಿಂದ ವಜಾಗೊಳಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.

ಅಜಿತ್ ಪವಾರ್ ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡು ಮೋಸ ಮಾಡಿದ್ದಾರೆ ಎಂದು ಪವಾರ್ ಹೇಳಿದ್ದಾರೆ. ಈ ಮಧ್ಯೆ ವಾಟ್ಸಾಪ್ ಸಂದೇಶ ಕಳಿಸಿರುವ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ, ತನ್ನ ಕುಟುಂಬ ಹಾಗೂ ಪಕ್ಷ ಒಡೆದುಹೋಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News