ನಾಯಿಯನ್ನು ತಬ್ಬಿಕೊಳ್ಳುವ ನಾವು ದಲಿತರನ್ನು ಮನೆಯ ಹೊರಗಡೆ ನಿಲ್ಲಿಸುತ್ತೇವೆ: ಬಿ.ಎಲ್.ಸಂತೋಷ್

Update: 2019-11-24 16:12 GMT

ಬೆಂಗಳೂರು, ನ.24: ರಸ್ತೆಗಳಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಿದೆ ಎನ್ನುವ ನಾವು ನಮ್ಮ ಮನಸ್ಸುಗಳಿಂದ ಅಸ್ಪೃಶ್ಯತೆ ನಿವಾರಣೆಯಾಗಿದೆಯಾ ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇಂದಿಲ್ಲಿ ಹೇಳಿದ್ದಾರೆ.

ರವಿವಾರ ನಗರದ ಆರ್.ವಿ. ಕಾಲೇಜಿನಲ್ಲಿ ನವ ಬೆಂಗಳೂರು ಫೌಂಡೇಷನ್‌ನಿಂದ ಆಯೋಜಿಸಿದ್ದ ಭಾರತೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಸ್ಪೃಶ್ಯತೆಯ ಬಗ್ಗೆ ಮಾತನಾಡುವವರು ಮೊದಲು ತಮ್ಮ ಮನಸ್ಸುಗಳಿಂದ ಅದನ್ನು ತೊಳೆಯಬೇಕಿದೆ ಎಂದರು.

ಇಂದಿಗೂ ನಮ್ಮ ಮನೆಗಳಲ್ಲಿ ಸಾಕಿದ ನಾಯಿಯನ್ನು ದಿನಪೂರ್ತಿ ತಬ್ಬಿಕೊಳ್ಳುತ್ತೇವೆ. ಅಲ್ಲದೆ, ಅದನ್ನು ನಾವು ಮಲಗುವ ಹಾಸಿಗೆ ಮೇಲೆಯೇ ಮಲಗಿಸುತ್ತೇವೆ, ಡೈನಿಂಗ್ ಟೇಬಲ್ ಮೇಲೆಯೂ ಕೂರಿಸಿಕೊಳ್ಳುತ್ತೇವೆ. ಆದರೆ, ಇದೇ ಮನೆಯೊಳಗೆ ದಲಿತರು ಬಂದಾಗ ಹೊರಗಡೆ ನಿಲ್ಲಿಸುತ್ತೇವೆ. ಇದನ್ನು ನ್ಯಾಯ ಎಂದು ಯಾವ ಧರ್ಮ, ಸಂಸ್ಕೃತಿ ಹೇಳುತ್ತದೆ ಎಂದು ಅವರು ನುಡಿದರು.

ಮನೆಯಲ್ಲಿ ಅಪ್ಪ, ಅಮ್ಮ, ಅಜ್ಜಿ, ಹೆಂಡತಿಯ ನೆಪವನ್ನು ಹೇಳಿ ಅಸ್ಪೃಶ್ಯತೆಯನ್ನು ಪಾಲಿಸುತ್ತೀರ. ಆದರೆ, ಅಜ್ಜಿಯ ಕೈಗೆ ಮೊಬೈಲ್ ಕೊಟ್ಟು ವಾಟ್ಸಾಪ್ ಬಳಸುವುದು ಕಲಿಸಲು ಸಾಧ್ಯವಾಗುವ ನಮಗೆ, ಅಸ್ಪೃಶ್ಯತೆಯ ತಪ್ಪು ಮನವರಿಕೆ ಮಾಡಲು ಸಾಧ್ಯವಾಗಲ್ಲವೇ ? ಹೀಗಾಗಿ, ಮೊದಲು ನಾವು ಬದಲಾಗಬೇಕಿದೆ. ಇದಕ್ಕಾಗಿ ಸಾತ್ವಿಕ ಬಂಡಾಯ ಸಾರಬೇಕಿದೆ ಎಂದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರನ್ನು ನಾವು ಮೊದಲು ಓದಬೇಕು. ಅವರನ್ನು ಓದಿದ್ದಲ್ಲಿ ಸಂವಿಧಾನ ನಮಗೆ ಅರ್ಥವಾಗುವುದಿಲ್ಲ. ಅಂಬೇಡ್ಕರ್ ಹಾಗೂ ಸಂವಿಧಾನ ಒಂದೇ ನಾಣ್ಯದೆರಡು ಮುಖಗಳಿದ್ದಂತೆ. ಅಂಬೇಡ್ಕರ್ ಜೀವನದಲ್ಲಿ ಅನುಭವಿಸಿದ ಸಂಕಷ್ಟಗಳೇ ಸಂವಿಧಾನವಾಗಿದ್ದು, ಅವರ ಹೋರಾಟದ ಅಂತಿಮ ರೂಪವೂ ಸಂವಿಧಾನವಾಗಿದೆ ಎಂದು ಹೇಳಿದರು.

ಒಂದು ವರ್ಗಕ್ಕೆ ನೀಡಿದ ಕೊಡುಗೆ ಅಲ್ಲ: ಮೀಸಲಾತಿಯ ಕುರಿತು ಸಮಾಜದಲ್ಲಿ ಹಲವು ಪ್ರಶ್ನೆಗಳಿರಬಹುದು. ಅದಕ್ಕೆ ಸ್ವಾತಂತ್ರವೂ ಇದೆ. ಆದರೆ, ಯಾವ ಕೊರತೆಯ ಕಾರಣಕ್ಕೆ ಅಂಬೇಡ್ಕರ್ ಮೀಸಲಾತಿಯನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ ಎಂದು ಯೋಚಿಸಬೇಕು. ಮೀಸಲಾತಿಯು ಅಂಬೇಡ್ಕರ್, ಸಂವಿಧಾನ ಅಥವಾ ಸಂಸತ್ತು ಸಮಾಜದಲ್ಲಿನ ಯಾವುದೋ ಒಂದು ವರ್ಗಕ್ಕೆ ನೀಡಿರುವ ಕೊಡುಗೆ ಅಲ್ಲವೇ ಅಲ್ಲ ಎಂದು ಸಂತೋಷ್ ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಪ್ರದ್ಮಶ್ರೀ ಪುರಸ್ಕೃತ ಟಿ.ವಿ.ಮೋಹನ್‌ದಾಸ್ ಪೈ ಹಾಗೂ ನವ ಬೆಂಗಳೂರು ಫೌಂಡೇಷನ್ ಸಂಸ್ಥಾಪಕ ಅನಿಲ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News