ಉಪಚುನಾವಣೆ: ಉತ್ತಮ ಪ್ರಜಾಕೀಯ ಪಕ್ಷದಿಂದ 15 ಅಭ್ಯರ್ಥಿಗಳು ಕಣದಲ್ಲಿ
ಬೆಂಗಳೂರು, ನ.24: ರಾಜ್ಯದಲ್ಲಿ ತೆರವುಗೊಳಿಸಲಾದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಅಧ್ಯಕ್ಷ ಹಾಗು ಚಿತ್ರನಟ ಉಪೇಂದ್ರ ತಿಳಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರವೇ ವಿಚಾರವಾಗಿದ್ದು, ವಿಚಾರಗಳಿಗೆ ಪ್ರಚಾರ ನೀಡಬೇಕಿದೆ. ಅದರಂತೆ ನಮ್ಮ ಪಕ್ಷ ವಿಚಾರಗಳಿಗೆ ಆದ್ಯತೆ ನೀಡಿ ವಿಚಾರಗಳನ್ನು ಜನರಿಗೆ ತಲುಪಿಸುವ ಮೂಲಕ ಪ್ರಚಾರ ಮಾಡಲಿದೆ. ಜನರು ಮತ ಚಲಾಯಿಸುವ ಮುನ್ನ ಉತ್ತಮ ವಿಚಾರಗಳಿಗೆ ಆದ್ಯತೆ ನೀಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಬಾರದು ಎಂದರು.
ಭ್ರಷ್ಟಾಚಾರ, ಜಾತಿ ಧರ್ಮ, ಕೆಸರೆರಚಾಟದ ಮೂಲಕ ಸುಳ್ಳು ಭರವಸೆಗಳನ್ನು ಪ್ರಚಾರ ಒಳಗೊಂಡ ರಾಜಕೀಯ ವ್ಯವಸ್ಥೆಯಾಗಿದೆ. ನಮ್ಮ ಪಕ್ಷವು ಸ್ವಚ್ಛ ಹಾಗೂ ಶಿಸ್ತುಬದ್ಧ ಸರಕಾರವನ್ನು ಬಯಸುತ್ತದೆ. ಇದೀಗ ನಮ್ಮ ಪಕ್ಷದಿಂದ 15 ಅಭ್ಯರ್ಥಿಗಳನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸುತ್ತಿದ್ದು, ಸಮಯ ಸಂದರ್ಭ ಬಂದಾಗ ನಾನು ಕೂಡ ಸ್ಪರ್ಧಿಸಲಿದ್ದೇನೆ ಎಂದರು.
ನಮ್ಮ ಪಕ್ಷದ ನೀತಿಯಲ್ಲಿ ಆಡಳಿತ ಅಂಗಗಳು, ವೆಬ್‌ಸೈಟ್, ಜನಸಂಪರ್ಕ, ವಾರ್ಡ್‌ಗಳ ಸಂಪರ್ಕದಂತಹ ವ್ಯವಸ್ಥೆಗಳಿದ್ದು, ಇವುಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದರ ಜೊತೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲಿದ್ದೇವೆ. ಮಾತ್ರವಲ್ಲದೆ ಜನರು ತಮ್ಮ ಸಮಸ್ಯೆ, ಸರಕಾರ ಸೌಲಭ್ಯದ ಬಗ್ಗೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಇನ್ನಿತರ ವಿಚಾರಗಳ ಬಗ್ಗೆ ವೈಯಕ್ತಿವಾಗಿ, ವೆಬ್‌ಸೈಟ್ ಹಾಗೂ ಪತ್ರಗಳ ಮೂಲಕ ತಿಳಿಸಿದರೆ ನಾಮ್ಮ ಪಕ್ಷವು ಸ್ಪಂದಿಸಲಿದೆ ಎಂದು ತಿಳಿಸಿದರು.