ಹಣ್ಣು ವ್ಯಾಪಾರಿಗಳಿಗೆ ಲಕ್ಷಾಂತರ ರೂ. ವಂಚನೆ ಆರೋಪ: ಎಫ್‌ಐಆರ್ ದಾಖಲು

Update: 2019-11-24 16:28 GMT

ಬೆಂಗಳೂರು, ನ.24: ರಾಜಧಾನಿ ಬೆಂಗಳೂರಿನ ಮಾರುಕಟ್ಟೆಯಲ್ಲಿರುವ ಹಣ್ಣು ವ್ಯಾಪಾರಿಗಳ ಬಳಿ ನಂಬಿಕೆ ಗಿಟ್ಟಿಸಿಕೊಳ್ಳುತ್ತಿದ್ದ ವ್ಯಕ್ತಿಯೋರ್ವ ಲಕ್ಷಾಂತರ ರೂಪಾಯಿ ಮೌಲ್ಯದ ಹಣ್ಣುಗಳನ್ನು ಖರೀದಿಸಿ, ಹಣ ನೀಡದೆ ವಂಚನೆ ಮಾಡುತ್ತಿದ್ದ ಪ್ರಕರಣಯೊಂದು ಬೆಳಕಿಗೆ ಬಂದಿದೆ.

ತಮಿಳುನಾಡು ಮೂಲದ ಎಸ್.ರಾಜಗೋಪಾಲ ಎಂಬಾತ ಈ ಕೃತ್ಯವೆಸಗಿರುವ ಆರೋಪ ಕೇಳಿಬಂದಿದ್ದು, ಹಣ್ಣಿನ ವ್ಯಾಪಾರಿ ಇಲ್ಲಿನ ರಾಜಾಜಿನಗರ ನಿವಾಸಿ ತಬ್ರೇಝ್ ಅಂಜುಂ ಎಂಬುವರು ಇಲ್ಲಿನ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ಎಫ್‌ಐಆರ್ ದಾಖಲಾಗಿದೆ.

ಅಂತರರಾಜ್ಯ ಮಟ್ಟದಲ್ಲಿ ವ್ಯಾಪಾರಿ ಆಗಿರುವ ತಬ್ರೇಝ್ ಅಂಜುಂ ಅವರು, ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಹಾಗೂ ಸಿಟಿ ಮಾರ್ಕೆಟ್‌ನಲ್ಲಿ ದಾಳಿಂಬೆ ಮತ್ತು ಸೇಬು ಹಣ್ಣುಗಳ ಬೃಹತ್ ಮಾರಾಟ ಮಳಿಗೆಗಳನ್ನು ಹೊಂದಿದ್ದಾರೆ. ಇದನ್ನು ಗುರಿಯಾಗಿಸಿ ಕೊಂಡ ಆರೋಪಿ ಎಸ್.ರಾಜಗೋಪಾಲ, ಒಂದೇ ಬಾರಿಗೆ 4 ರಿಂದ ಐದಾರು ಲಕ್ಷ ರೂ. ಮೌಲ್ಯದ ಹಣ್ಣುಗಳನ್ನು ಖರೀದಿಸಿ, ಹಣ ನೀಡುವ ಮೂಲಕ ನಂಬಿಕೆಗಿಟ್ಟಿಸಿಕೊಂಡಿದ್ದಾನೆ. ನಂತರ, ಸರಿ ಸುಮಾರು 30 ರಿಂದ 40 ಲಕ್ಷ ರೂ. ಮೌಲ್ಯದ ಹಣ್ಣು ಖರೀದಿಸಿದರೂ, ಹಣ ನೀಡದೆ ತಲೆಮರೆಸಿಕೊಳ್ಳುತ್ತಿದ್ದ ಎಂದು ತಬ್ರೇಝ್ ಅಂಜುಂ ದೂರಿನಲ್ಲಿ ಆರೋಪಿಸಿದ್ದಾರೆ.

ಚೆಕ್ ನೀಡಿ ವಂಚನೆ?: ಕೆಲ ದಿನಗಳ ಹಿಂದೆ ಮತ್ತೇ ತಬ್ರೇಝ್ ಅಂಜುಂ ಅವರ ಬಳಿ ಬಂದಿದ್ದ ಆರೋಪಿಯು, ಖಾಸಗಿ ಬ್ಯಾಂಕ್‌ಗಳ ಚೆಕ್ ನೀಡಿ, ಹಣವನ್ನು ತಾವು ಪಡೆದುಕೊಂಡು, ವ್ಯಾಪಾರ ಮುಂದುವರೆಸೋಣ ಎಂದಿದ್ದ. ಆದರೆ, ಖಾತೆಯಲ್ಲಿ ಠೇವಣಿ ನಗದು ಇಲ್ಲದ ಕಾರಣ, ಚೆಕ್ ಬೌನ್ಸ್ ಆಗಿದೆ ಎಂದು ದೂರುದಾರರು ಹೇಳಿದರು.

ಬೆದರಿಕೆ: ಆರೋಪಿ ರಾಜಗೋಪಾಲ ಮೇಲೆ ಪೊಲೀಸರಿಗೆ ದೂರು ನೀಡಿದ್ದ ಸಂದರ್ಭದಲ್ಲಿ ವ್ಯಾಪಾರಿ ತಬ್ರೇಝ್ ಅವರಿಗೆ ಬೆದರಿಕೆ ಹಾಕಿದ್ದು, ಹಣ ವಾಪಸ್ಸು ಕೇಳಿದರೆ, ಹೊರ ರಾಜ್ಯಗಳ ವ್ಯಕ್ತಿಗಳಿಂದ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯಾವ ಪ್ರಕರಣ ದಾಖಲು

ಆರೋಪಿ ಐಪಿಸಿ 1860ರ ಅನ್ವಯ 420(ವಂಚನೆ), 504(ಬೆದರಿಕೆ) ಹಾಗೂ 506 (ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ) ಆರೋಪದಡಿ ಇಲ್ಲಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜತೆಗೆ ತಮಿಳುನಾಡು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಸೂಕ್ತ ಕ್ರಮ ಕೈಗೊಳ್ಳಿ’

ರಾಜಗೋಪಾಲ ಇದುವರೆಗೂ ಹತ್ತಾರು ವ್ಯಾಪಾರಿಗಳಿಗೆ ವಂಚನೆ ಮಾಡಿದ್ದು, ಈ ಸಂಬಂಧ ಪೊಲೀಸ್ ಠಾಣೆಗಳಲ್ಲೂ ದೂರುಗಳು ದಾಖಲಾಗಿವೆ. ಆದರೆ, ಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿಲ್ಲ. ಮುಂದೆಯಾದರೂ, ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಿ.

-ತಬ್ರೇಝ್, ದೂರುದಾರ

ವಂಚನೆಗೊಳಗಾದವರ ವಿವರ ಮತ್ತು ಹಣ ?

ಕೇವಲ ತಬ್ರೇಝ್ ಮಾತ್ರವಲ್ಲದೆ, ವ್ಯಾಪಾರಿಗಳಾದ ಹನುಮಂತ-8 ಲಕ್ಷ, ರಘುನಾಥ್-15 ಲಕ್ಷ, ರಾಕೇಶ್-15, ವಾಸು-5, ಮತೀನ್-15 ಲಕ್ಷ, ಬಾಬು-4 ಲಕ್ಷ, ಲಾಲುಸೇಠ್-2 ಲಕ್ಷ, ರೆಡ್ಡಿ ಮಂಡಿ-7 ಲಕ್ಷ ಸೇರಿದಂತೆ ಹತ್ತಾರು ಮಂದಿಗೆ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ವಂಚನೆ ಮಾಡಿದ್ದು, ಇದರಿಂದ ಹಣ್ಣು ವ್ಯಾಪಾರಿಗಳಿಗೆ ಬಹುದೊಡ್ಡ ಪೆಟ್ಟು ಬಿದ್ದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News