ಕನ್ನಡ ಭಾಷಾ ಶಾಸ್ತ್ರೀಯ ಅಧ್ಯಯನಕ್ಕೆ ಪ್ರಾಕೃತ ಭಾಷೆಯ ತಿಳುವಳಿಕೆ ಅಗತ್ಯ: ಪ್ರೊ.ಕೆ.ವಿ.ನಾರಾಯಣ್
ಬೆಂಗಳೂರು, ನ.24: ಕನ್ನಡ ಭಾಷಾ ಶಾಸ್ತ್ರೀಯ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಪ್ರಾಕೃತ ಭಾಷೆಯ ತಿಳುವಳಿಕೆ ಅಗತ್ಯವಿದೆ ಎಂದು ಭಾಷಾ ಶಾಸ್ತ್ರಜ್ಞ ಪ್ರೊ.ಕೆ.ವಿ. ನಾರಾಯಣ ಅಭಿಪ್ರಾಯಿಸಿದ್ದಾರೆ.
ರವಿವಾರ ಪರಸ್ಪರ ಪುಸ್ತಕ ಪ್ರಕಾಶನ ನಗರದ ಬಿಎಂಶ್ರೀ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಹಿರಿಯ ಸಂಶೋಧಕ ಆರ್.ಲಕ್ಷ್ಮಿ ನಾರಾಯಣರವರ ‘ಪ್ರಾಕೃತ-ಕನ್ನಡ ಬೃಹತ್ ನಿಘಂಟು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಾಕೃತ ಹಾಗೂ ಕನ್ನಡ ಭಾಷೆ ಕೊಡುಕೊಳ್ಳುವಿಕೆಯ ಸಂಬಂಧ ಸುಮಾರು ಎರಡು ವರ್ಷಗಳಿಗೂ ಹೆಚ್ಚಿನದಾಗಿದೆ. ಪ್ರಾಕೃತ ಭಾಷೆಯ ಅನೇಕ ಆಡು ಮಾತುಗಳು ಕನ್ನಡಕ್ಕೆ ಬಂದಿವೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ ಎಂದರು.
ಹಾಗೆ ನೋಡಿದರೆ ದೇಶದ ಸಾಹಿತ್ಯ, ಪರಂಪರೆಯು ಸಂಸ್ಕೃತಕ್ಕಿಂತ ಪ್ರಾಕೃತ ಭಾಷೆಯ ಮೂಲಕವೇ ಹೊರ ದೇಶಗಳಿಗೆ ಹೋಗಿವೆ. ಅದರಲ್ಲೂ ಬೌದ್ದ ಸಾಹಿತ್ಯ, ಚಿಂತನೆಗಳು ಜಪಾನ್, ಚೈನಾ ಸೇರಿದಂತೆ ಹಲವು ದೇಶಗಳಿಗೆ ಪಸರಿಸಿವೆ. ಈ ಬೌದ್ದ ಸಾಹಿತ್ಯವು ಪ್ರಾಕೃತದಿಂದ ಟಿಬೆಟ್ ಭಾಷೆಗೆ ಅನುವಾದವಾಗಿ, ಅಲ್ಲಿಂದ ಸಂಸ್ಕೃತ ಭಾಷೆಗೆ ಅನುವಾದವಾಗಿರುವುದನ್ನು ನಾವು ನೋಡಬಹುದಾಗಿದೆ ಎಂದು ಅವರು ತಿಳಿಸಿದರು.
ಕುವೆಂಪು ಭಾಷಾ ಭಾರತೀ ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್ ಮಾತನಾಡಿ, ಸಾಹಿತ್ಯ ಕ್ಷೇತ್ರಗಳಿಗೆ ಕತೆ, ಕಾದಂಬರಿ ಬರೆದರೆ ಬೇಗ ಪ್ರಸಿದ್ಧಿ ಆಗಬಹುದು. ಆದರೆ, ನಿಘಂಟು, ಶಾಸನಗಳ ಕೆಲಸ ಮಾಡಿದರೆ ಜನಪ್ರೀಯತೆ ಸಿಗುವುದಿಲ್ಲ. ಆದರೂ, ಶ್ರದ್ದೆಯಿಂದ ಮಾಡಬೇಕಾದ ಕಾರ್ಯವಿದೆ ಎಂದು ತಿಳಿಸಿದರು.
ಕನ್ನಡದ ಭಾಷೆಯ ವೈಶ್ಟಿಷ್ಟತೆ ಏನೆಂದರೆ, 800 ವರ್ಷಗಳ ಹಿಂದಿನ ಕನ್ನಡದ ಆಡು ಮಾತಿಗೂ ಈಗಿನ ಆಡಿನ ಮಾತಿನ ನಡುವೆ ಹೆಚ್ಚಿನ ಬದಲಾವಣೆ ಏನಿಲ್ಲ. ವಚನ ಕಾರರು ಆಡಿರುವ ಮಾತಿಗೂ ಈಗಿನ ಮಾತನ್ನು ತುಲನೆ ಮಾಡಿದರೆ ಸಾಮ್ಯತೆಗಳು ಹೆಚ್ಚಿವೆ. ಹೀಗಾಗಿ ಕನ್ನಡ ಭಾಷೆ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸುಲಭವಾಗಿ ರವಾನೆಯಾಗುತ್ತಿದೆ ಎಂದು ಅವರು ಹೇಳಿದರು.
ಹಿರಿಯ ನಾಟಕಕಾರ ಮರುಳಸಿದ್ಧಪ್ಪ ಮಾತನಾಡಿ, ನಮ್ಮ ಕನ್ನಡ ಭಾಷೆಯ ಪರಂಪರೆಗೆ ಪ್ರಾಕೃತಿಕ ಹಾಗೂ ಸಂಸ್ಕೃತ ಭಾಷೆಗಳೆರಡೂ ಕೊಡುಗೆಗಳನ್ನು ನೀಡಿವೆ. ಸಂಸ್ಕೃತಿ ಭಾಷೆಗೆ ವಿಶ್ವವಿದ್ಯಾಲಯಗಳಿವೆ. ಪ್ರತಿ ಕಾಲೇಜಿನಲ್ಲಿ ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ. ಆದರೆ, ಪ್ರಾಕೃತ ಭಾಷೆಯ ಕುರಿತು ಅಧ್ಯಯನ, ಬೆಳವಣಿಗೆ ಆಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಸಂಶೋಧಕ ಆರ್.ಲಕ್ಷ್ಮಿ ನಾರಾಯಣ ರಚಿಸಿರುವ ‘ಪ್ರಾಕೃತ-ಕನ್ನಡ ಬೃಹತ್ ನಿಘಂಟು’ ಹಿಂದೆ ಮೂರು ವರ್ಷಗಳ ನಿರಂತರವಾದ ಪರಿಶ್ರಮವಿದೆ. ಈ ನಿಘಂಟು ಕನ್ನಡ ಭಾಷೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮವಾದ ಕೊಡುಗೆಯಾಗಬಲ್ಲದು. ಇಂತಹ ಕೃತಿಗಳ ಪ್ರಕಟಿಸುವುದೇ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕರ್ತವ್ಯವೆಂದು ಅವರು ಹೇಳಿದರು.
‘ಕಸಾಪ, ಕುವೆಂಪು ಭಾಷಾ ಭಾರತೀ ಪ್ರಾಧಿಕಾರ ಸೇರಿದಂತೆ ವಿವಿಧ ಸಂಸ್ಥೆಗಳು ಹೊರ ತಂದಿರುವ ಕನ್ನಡ ನಿಘಂಟುಗಳನ್ನು ಡಿಜಿಟಲೀಕರಣ ಮಾಡುವುದು ಅಗತ್ಯವಿದೆ ಎಂದು ಪ್ರೊ.ಕೆ.ವಿ.ನಾರಾಯಣ್ ಹೇಳಿರುವುದು ಸೂಕ್ತವಾದ ಅಭಿಪ್ರಾಯವಾಗಿದೆ. ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪ್ರಾಧಿಕಾರದಿಂದ ಕನ್ನಡದಿಂದ ಇತರೆ ಭಾಷೆಗೆ ಅನುವಾದಗೊಂಡಿರುವ ಪುಸ್ತಕಗಳ ಮಾರಾಟಕ್ಕೆ ತಾಲೂಕು ಗ್ರಂಥಾಲಯಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲು ಮಾತುಕತೆ ನಡೆಸಲಾಗುತ್ತಿದೆ’
-ಅಜಕ್ಕಳ ಗಿರೀಶ್ ಭಟ್, ಅಧ್ಯಕ್ಷ, ಕುವೆಂಪು ಭಾಷಾ ಭಾರತೀ ಪ್ರಾಧಿಕಾರ