ಬೆಂಗಳೂರು: ವಿಆರ್‌ಎಸ್ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿದ ಬಿಎಸ್‌ಎನ್‌ಎಲ್ ನೌಕರರು

Update: 2019-11-25 12:25 GMT

ಬೆಂಗಳೂರು, ನ.25: ಸರಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳ ನೌಕರರ ಸ್ವಯಂ ನಿವೃತ್ತಿ ಯೋಜನೆಯ(ವಿಆರ್‌ಎಸ್) ಸತ್ಯಾಂಶ ಕುರಿತು ಕೇಂದ್ರ ಸರಕಾರ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿ ನೌಕರರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.

ಸೋಮವಾರ ಇಲ್ಲಿನ ಎಂಜಿ ರಸ್ತೆಯ ಬಿಎಸ್ಸೆನ್ನೆಲ್ ಕಚೇರಿ ಆವರಣದಲ್ಲಿ ಬಿಎಸ್ಸೆನ್ನೆಲ್‌ಇಯು, ಬಿಟಿಇಯು, ಎಫ್‌ಎನ್‌ಟಿಒ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನೂರಾರು ನೌಕರರು, ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಕೇಂದ್ರ ಸರಕಾರ ನೌಕರರ ಹಿತರಕ್ಷಣಾ ಕಾಪಾಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

ವಿಆರ್‌ಎಸ್ ತೆಗೆದುಕೊಂಡ ಬಳಿಕ ವೈಯಕ್ತಿಕವಾಗಿ ನೌಕರನಿಗೆ ಎಷ್ಟು ಆರ್ಥಿಕ ನಷ್ಟವುಂಟಾಗುತ್ತದೆ ಎಂಬ ಅರಿವು ಇಲ್ಲದೆ, ಹಲವು ಮಂದಿ ಈ ನಿವೃತ್ತಿ ಯೋಜನೆಗೆ ಮುಂದಾಗುತ್ತಿದ್ದಾರೆ. ಅಷ್ಟೇ ಅಲ್ಲದೆ, ನಿವೃತ್ತಿ ಯೋಜನೆಗೆ ಸಂಬಂಧಪಟ್ಟ ಹಲವು ಅಂಶಗಳನ್ನು ಈಡೇರಿಸದೆ, ಬಿಎಸ್ಸೆನ್ನೆಲ್ ಅಧಿಕಾರಿಗಳು ನೌಕರರ ಮೇಲೆ ಬಲವಂತದ ಒತ್ತಡ ಹೇರಲು ಮುಂದಾಗಿದ್ದಾರೆ ಎಂದು ನೌಕರರು ಆರೋಪಿಸಿದರು.

ಉಪವಾಸ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿದ ಯೂನಿಯನ್ ಪ್ರಧಾನ ಕಾರ್ಯದರ್ಶಿ ಪಿ.ಅಭಿಮನ್ಯು, ಮೂರನೇ ವೇತನ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆಯ ಸೌಲಭ್ಯಗಳು ನಿವೃತ್ತಿ ಯೋಜನೆಗೆ ಸಹಿ ಹಾಕಿದವರಿಗೆ ಲಭ್ಯವಿಲ್ಲ ಎಂದಾದರೆ ಹೆಚ್ಚಿನ ನಷ್ಟವಾಗಲಿದ್ದು, ನೌಕರರ ಬದುಕು ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಲಿದೆ ಎಂದು ಹೇಳಿದರು.

ನೌಕರರ ವಿರೋಧಿ ನೀತಿಗಳೇ ಹೆಚ್ಚಾಗಿದ್ದು, ಇಂತಹ ಹಲವು ಅಂಶಗಳಿಗೆ ಕೇಂದ್ರ ಸರಕಾರ ಈ ಕೂಡಲೇ ಸ್ಪಷ್ಟೀಕರಣ ನೀಡಬೇಕು. ಇಲ್ಲದಿದ್ದಲ್ಲಿ, ನಿವೃತ್ತಿ ಯೋಜನೆಯಿಂದ ಹಿಂದೆ ಸರಿಯುವಂತೆ ನೌಕರರಿಗೆ ಹೇಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News