ಭಾಷಣಕ್ಕಷ್ಟೆ ಸೀಮಿತವಾದ ಬಿಜೆಪಿಗೆ ಎಲ್ಲ ಕ್ಷೇತ್ರಗಳಲ್ಲೂ ಸೋಲು: ದಿನೇಶ್ ಗುಂಡೂರಾವ್
Update: 2019-11-25 19:46 IST
ಬೆಂಗಳೂರು, ನ.25: ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿರುವ ಬಿಜೆಪಿ, ಕೇವಲ ಭಾಷಣಕ್ಕಷ್ಟೆ ಸೀಮಿತವಾಗಿದ್ದು, ಉಪಚುನಾವಣೆಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸೋಲು ಅನುಭವಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸೋಮವಾರ ನಗರದ ಮಹಾಲಕ್ಷ್ಮೀಲೇಔಟ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಪರ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಅನೈತಿಕ ಸರಕಾರ, ಆರ್ಥಿಕ ಕುಸಿತ ಎಲ್ಲವನ್ನು ಜನ ನೋಡುತ್ತಿದ್ದು, ಬಿಜೆಪಿಯವರು ಕೇವಲ ಭಾಷಣಕ್ಕೆ ಸೀಮಿತ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಠಿಣ ಸ್ಪರ್ಧೆ ನೀಡುತ್ತಿದೆ. ಹೀಗಾಗಿಯೇ, ಬಿಜೆಪಿ ನಾಯಕರು ಬೀದಿಗಿಳಿದು ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕರಾದ ಜಿ.ಪರಮೇಶ್ವರ್, ಎಚ್.ಕೆ. ಪಾಟೀಲ್ ಸೇರಿದಂತೆ ಎಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.