ಚಿಕಾಗೋ: ಹೈದರಾಬಾದ್ ಮೂಲದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಹತ್ಯೆ

Update: 2019-11-27 03:45 GMT

ವಾಷಿಂಗ್ಟನ್, ನ.27: ಹೈದರಾಬಾದ್ ಮೂಲದ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ ಘಟನೆ ಚಿಕಾಗೋದ ಇಲಿನೋಯಿಸ್ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ.

ವಿವಿಯ ಗ್ಯಾರೇಜ್‌ನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಡೊನಾಲ್ಡ್ ಥ್ರೂಮನ್ ಎಂಬ ಆರೋಪಿಯನ್ನು ಚಿಕಾಗೋ ಮೆಟ್ರೊ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆರೋಪಿ ವಿರುದ್ಧ ಹತ್ಯೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ದರೋಡೆ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡು ಎರಡೂವರೆ ವರ್ಷಗಳಿಂದ ಜೈಲಿನಲ್ಲಿದ್ದ ಥ್ರೂಮನ್ ಪರೋಲ್ ಮೇಲೆ ಬಿಡುಗಡೆಯಾಗಿದ್ದ.

ಶನಿವಾರ ಈ ಘಟನೆ ನಡೆದಿದ್ದು, ಯುವತಿ ನಾಪತ್ತೆ ಬಗ್ಗೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆಕೆಯ ಮೊಬೈಲ್ ಲೊಕೇಶನ್ ಪತ್ತೆ ಮಾಡಿದಾಗ ವಿವಿ ಗ್ಯಾರೇಜ್‌ನಲ್ಲಿ ಇದ್ದುದು ಗೊತ್ತಾಯಿತು. ಶನಿವಾರ ರಾತ್ರಿ 1:35ರ ವೇಳೆಗೆ ಸಂತ್ರಸ್ತೆ ಈ ಕೊಠಡಿ ಪ್ರವೇಶಿಸಿದ್ದಾಳೆ. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಥ್ರೂಮನ್ ಕೊಠಡಿಯ ಒಳಗೆ ಕೆಲ ಹೊತ್ತು ಇದ್ದು ಬಳಿಕ ಬಸ್‌ನಲ್ಲಿ ತೆರಳಿದ್ದಾನೆ ಎನ್ನುವ ಅಂಶ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಯಿಂದ ತಿಳಿದುಬಂತು ಎಂದು ಇಲಿನೋಯಿಸ್ ಪೊಲೀಸ್ ಮುಖ್ಯಸ್ಥ ಕೆವಿನ್ ಬೂಕರ್ ಹೇಳಿದ್ದಾರೆ.

ಸಂತ್ರಸ್ತೆ ಯುವತಿಯ ಕುಟುಂಬದವರು ಹಲವು ವರ್ಷಗಳ ಹಿಂದೆ ಅಮೆರಿಕಕ್ಕೆ ವಲಸೆ ಬಂದಿದ್ದರು. ಯುವತಿಗೆ ತಾಯಿ ಹಾಗೂ ಇಬ್ಬರು ಸಹೋದರಿಯರಿದ್ದರು. ಇತರ ಸಂಬಂಧಿಕರು ಸಿಕಂದರಾಬಾದ್‌ನಲ್ಲಿ ವಾಸವಿದ್ದಾರೆ.

"ಆಕೆಯ ಸಾವಿನಿಂದ ತೀರಾ ದುಃಖ ತಂದಿದೆ. ನಮ್ಮ ಆನರ್ಸ್ ಕಾಲೇಜಿನ ಸದಸ್ಯೆಯಾಗಿದ್ದ ಕಿನೆಸಿಯಾಲಜಿ ವಿದ್ಯಾರ್ಥೀನಿ ವೈದ್ಯೆಯಾಗಿ ಇತರರಿಗೆ ಸೇವೆ ಮಾಡುವ ಕನಸು ಕಂಡಿದ್ದಳು. ಈ ದುಃಖದ ಸಂದರ್ಭದಲ್ಲಿ ನಮ್ಮೆಲ್ಲರ ಮನಸ್ಸುಗಳು ಆಕೆಯ ಕುಟುಂಬದ ಜತೆ ಇರುತ್ತದೆ" ಎಂದು ಕುಲಪತಿ ಮೈಕೆಲ್ ಡಿ. ಅಮಿರಿಡಿಸ್ ಹೇಳಿಕೆ ನೀಡಿದ್ದಾರೆ. ಆಕೆಯ ಗೌರವಾರ್ಥ ಕ್ಯಾಂಪಸ್‌ನಲ್ಲಿ ಹಳದಿ ರಿಬ್ಬನ್‌ಗಳನ್ನು ಇಳಿಯಬಿಡಲಾಗಿತ್ತು.

ಡೊನಾಲ್ಡ್ ಥ್ರೂಮನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News