ಮಹಾರಾಷ್ಟ್ರ: ರಾಜ್ಯಪಾಲರನ್ನು ಭೇಟಿಯಾದ ಉದ್ಧವ್ ಠಾಕ್ರೆ

Update: 2019-11-27 05:59 GMT
Photo: Twitter(@ndtv)

ಮುಂಬೈ, ನ.27: ಶಿವಸೇನೆ ಮುಖ್ಯಸ್ಥ ಮತ್ತು 'ಮಹಾ ವಿಕಾಸ್ ಅಘಾಡಿ' (ಎನ್‌ಸಿಪಿ-ಕಾಂಗ್ರೆಸ್-ಶಿವಸೇನೆ ಮೈತ್ರಿ) ಸಿಎಂ ಅಭ್ಯರ್ಥಿ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಬುಧವಾರ ಬೆಳಗ್ಗೆ  ರಾಜ ಭವನದಲ್ಲಿ ಭೇಟಿಯಾದರು..

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾದರು. ಈ ಸಂದರ್ಭ ಉದ್ಧವ್ ಅವರ ಪತ್ನಿ ರಶ್ಮಿ ಠಾಕ್ರೆ ಕೂಡ ಇದ್ದರು.

ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಗುರುವಾರ ಸಂಜೆ ಸಂಜೆ 6.40 ಕ್ಕೆ ಶಿವಾಜಿ ಪಾರ್ಕ್‌ನಲ್ಲಿ  ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ರಾಜ್ಯದ 29ನೇ ಮುಖ್ಯಮಂತ್ರಿಯಾಗಲಿದ್ದಾರೆ.

ಮಂಗಳವಾರ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ (ಮಹಾರಾಷ್ಟ್ರ ವಿಕಾಸ್ ಅಘಾಡಿ) ನಾಯಕರಾಗಿ ಉದ್ಧವ್ ಠಾಕ್ರೆ ಅವರನ್ನು ಆಯ್ಕೆ ಮಾಡಿತ್ತು.

ಎನ್‌ಸಿಪಿ ಮುಖಂಡ ಜಯಂತ್ ಪಾಟೀಲ್ ಅವರು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಬೇಕೆಂದು ನಾವೆಲ್ಲರೂ ಬಯಸುತ್ತೇವೆ ಎಂದು ಹೇಳಿದರು. ಅವರು ಉದ್ಧವ್ ಹೆಸರನ್ನು ಪ್ರಸ್ತಾಪಿಸಿದರು, ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಈ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಅವರು "ನೀವು ನೀಡಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದರು. ನಾನು ಒಬ್ಬನೇ ಅಲ್ಲ, ನೀವು ಸಹ ನನ್ನೊಂದಿಗೆ ಮುಖ್ಯಮಂತ್ರಿ. ಇಂದು ನಡೆದದ್ದು ನಿಜವಾದ ಪ್ರಜಾಪ್ರಭುತ್ವ. ಒಟ್ಟಾಗಿ ನಾವು ರೈತರ ಕಣ್ಣೀರನ್ನು ಒರೆಸುತ್ತೇವೆ. ನಾವು ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕನಸನ್ನು ನನಸು ಮಾಡುತ್ತೇವೆ" ಎಂದು ಹೇಳಿದ್ದರು.

ಮೊದಲ ಬಾರಿಗೆ ಠಾಕ್ರೆ ಕುಟುಂಬದ ಸದಸ್ಯರೊಬ್ಬರು ಮುಖ್ಯಮಂತ್ರಿಯಾಗುತ್ತಿದ್ದಾರೆ. ಇಲ್ಲಿಯವರೆಗೆ, ಠಾಕ್ರೆ ಕುಟುಂಬವು ಚುನಾವಣೆಯಿಂದ ದೂರವಿತ್ತು, ಆದರೆ ಕಳೆದ  ವಿಧಾನಸಭಾ ಚುನಾವಣೆಯಲ್ಲಿ, ಕುಟುಂಬವು ಈ ಸಂಪ್ರದಾಯವನ್ನು ಮುರಿದು ಆದಿತ್ಯ ಠಾಕ್ರೆ ಅವರನ್ನು ಕಣಕ್ಕಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News