ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಿಡಿ

Update: 2019-11-27 06:35 GMT

ಹೊಸದಿಲ್ಲಿ, ನ.27: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಿಡಿ ಕಾರಿರುವ ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ, ಸರಕಾರಿ ಒಡೆತನದ ಏರ್ ಇಂಡಿಯಾದ ಪ್ರಸ್ತಾವಿತ ಮಾರಾಟ ಕುರಿತಂತೆ ಸಚಿವೆ ಹಿತಾಸಕ್ತಿಯ ಸಂಘರ್ಷ ಹೊಂದಿದ್ದಾರೆಂದು ಆರೋಪಿಸಿದ್ದಾರೆ. ಸೀತಾರಾಮನ್ ತಾವು ಈ ಹಿಂದೆ ಕೆಲಸ ಮಾಡಿದ್ದ ಚಾರ್ಟರ್ಡ್ ಅಕೌಂಟೆನ್ಸಿ ಸಂಸ್ಥೆ ಪ್ರೈಸ್‌ ವಾಟರ್‌ಹೌಸ್ ಕೂಪರ್ಸ್‌ ಸಲ್ಲಿಸಿದ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆಂದೂ ಸ್ವಾಮಿ ಆಪಾದಿಸಿದ್ದಾರೆ.

‘‘ಪ್ರೈಸ್ ವಾಟರ್‌ಹೌಸ್ ಹಾಗೂ ಕೂಪರ್ ವರದಿಯ ಆಧಾರದಲ್ಲಿ ಏರ್ ಇಂಡಿಯಾ ಮಾರಾಟ ಕುರಿತಂತೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದ ಸಚಿವರ ಸಮಿತಿ ಹೇಗೆ ನಿರ್ಧರಿಸಬಹುದು ? ಆಕೆ ಲಂಡನ್‌ನಲ್ಲಿ ವಾಸವಾಗಿದ್ದಾಗ ಪಿಡಬ್ಲ್ಯುಸಿ ಉದ್ಯೋಗಿಯಾಗಿದ್ದರು. ಅಷ್ಟಕ್ಕೂ ಇಂತಹ ವಿಚಾರಗಳಲ್ಲಿ ನಮಗೇಕೆ ವಿದೇಶಿ ಕನ್ಸಲ್ಟೆನ್ಸಿ ಕಂಪೆನಿಗಳು ಬೇಕು’’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ತಮ್ಮ ಫಾಲೋವರ್ ವೆಂಕಟ್ ಸುಧೀಂದ್ರ ಎಂಬವರು ನಿರ್ಮಲಾ ಸೀತಾರಾಮನ್ ಅವರನ್ನು ಟೀಕಿಸಿ ಮಾಡಿದ ಟ್ವೀಟನ್ನೂ ಸ್ವಾಮಿ ರಿಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಹೀಗಿತ್ತು. ‘‘ಬಿಜೆಪಿ ಸರಕಾರದ ವಿತ್ತ ಸಚಿವೆ ಜೆಎನ್‌ಯುನವರಾಗಿದ್ದು ಹಾಗೂ ಪಿಡಬ್ಲ್ಯುಸಿಯ ಮಾಜಿ ಉದ್ಯೋಗಿ. ಯಾವುದೇ ಆಧಾರವಿಲ್ಲದೆ ಪಿಡಬ್ಲ್ಯುಸಿ ಏರ್ ಇಂಡಿಯಾ ಮಾರಾಟ ಮಾಡಬೇಕೆಂಬ ಶಿಫಾರಸು ಮಾಡಿದೆ. ಅವರು ಮುಖ್ಯಸ್ಥೆಯಾಗಿದ್ದ ಸಂಸ್ಥೆಯ ಈ ಸಲಹೆಯನ್ನು ಅವರು ಒಪ್ಪಿದರೆ ಇದು ಹಿತಾಸಕ್ತಿಯ ಸಂಘರ್ಷದ ಸ್ಪಷ್ಟ ಪ್ರಕರಣವಾಗುತ್ತದೆ.’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News