ಖರ್ಚು ಮಾಡುವ ವಿಚಾರದಲ್ಲಿ ಬಿಜೆಪಿ ಜೊತೆ ಸ್ಪರ್ಧೆ ಅಸಾಧ್ಯ: ಸಿದ್ದರಾಮಯ್ಯ

Update: 2019-11-27 12:17 GMT

ಬೆಂಗಳೂರು, ನ. 27: ‘ತಮ್ಮನ್ನು ಮಂತ್ರಿಯೂ ಮಾಡಬೇಕು ಹಾಗೂ ಉಪ ಚುನಾವಣೆಯಲ್ಲಿ ಹಣವನ್ನೂ ಖರ್ಚು ಮಾಡಬೇಕೆಂದು ಸಿಎಂ ಬಿಎಸ್‌ವೈ ಜೊತೆ ಅನರ್ಹ ಶಾಸಕರು ಮೊದಲೇ ಒಪ್ಪಂದ ಮಾಡಿಕೊಂಡಿದ್ದರು. ಹೀಗಾಗಿ ಉಪ ಚುನಾವಣೆಯಲ್ಲಿ ಬಿಜೆಪಿ ಕೋಟಿಗಟ್ಟಲೆ ಹಣ ಸುರಿಯುತ್ತಿದೆ, ನಮ್ಮ ಪಕ್ಷದಲ್ಲಿ ಹಣವಿಲ್ಲ. ಖರ್ಚು ಮಾಡುವ ವಿಚಾರದಲ್ಲಿ ಬಿಜೆಪಿ ಜೊತೆ ಸ್ಪರ್ಧೆ ಅಸಾಧ್ಯ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ದೇವದುರ್ಗಕ್ಕೆ ಬಿಎಸ್‌ವೈ ಹೋಗಿ ಜೆಡಿಎಸ್ ಶಾಸಕನ ಖರೀದಿಗೆ ಯತ್ನಿಸಿದ್ದು ಅಡಿಯೋ ಟೇಪ್‌ನಲ್ಲಿಲ್ವೇ? ಅದು ತಮ್ಮದೇ ಧ್ವನಿ ಎಂದು ಅವರು ಒಪ್ಪಿಕೊಂಡಿಲ್ವೆ? ಇದರ ಅರ್ಥ ಏನು? ಆತ್ಮಸಾಕ್ಷಿಗಿಂತ ಮಿಗಿಲಾದ ಸಾಕ್ಷಿ ಯಾವುದು?’ ಎಂದು ಪ್ರಶ್ನಿಸಿದ್ದಾರೆ.

‘ಹದಿನೇಳು ಶಾಸಕರನ್ನು ಬಿಜೆಪಿ ದುಡ್ಡು ಕೊಟ್ಟೇ ಖರೀದಿಸಿದ್ದಕ್ಕೆ ಸಾಂದರ್ಭಿಕ ಸಾಕ್ಷ್ಯಗಳಿವೆ. ಡಿಸಿಎಂ ಅಶ್ವಥ್ ನಾರಾಯಣ, ಶಾಸಕರಾದ ಎಸ್.ಆರ್.ವಿಶ್ವನಾಥ್, ಅರವಿಂದ ಲಿಂಬಾವಳಿ ಮತ್ತು ಸಿ.ಪಿ.ಯೋಗೇಶ್ವರ್ ಮನೆಗೆ ಬಂದು 5 ಕೋಟಿ ರೂ. ನೀಡಿದ್ದರು ಎಂದು ಮಾಜಿ ಸಚಿವ ಶ್ರೀನಿವಾಸಗೌಡ ವಿಧಾನಸಭೆಯಲ್ಲಿ ಹೇಳಿಲ್ವೆ? ಇನ್ನು ಏನು ಸಾಕ್ಷಿ ಬೇಕು?’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ರಾಜಾರೋಷವಾಗಿ ಬಿಜೆಪಿ ದುಡ್ಡು ಹಂಚ್ತಿದೆ, ಸಚಿವ ಕಾರಜೋಳ ದುಡ್ಡು ಹಂಚಿದ್ದು ಟಿವಿಯಲ್ಲಿ ಬರ್ತಿದೆ. ಬಿಎಸ್‌ವೈ ಜಾತಿ ಮೇಲೆ ಮತ ಕೇಳ್ತಿದ್ದಾರೆ, ಮಂತ್ರಿ ಮಾಡ್ತೀನಿ, ತಾಲೂಕು ಮಾಡ್ತೀನಿ ಎಂದು ಆಶ್ವಾಸನೆ ಕೊಡ್ತಿದ್ದಾರೆ. ದೂರು ಕೊಟ್ಟರೂ ಕ್ರಮ ಇಲ್ಲ, ಚುನಾವಣಾ ಆಯೋಗ ಅಸ್ತಿತ್ವದಲ್ಲಿದೆಯೇ?’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ನಾನು ಜೆಡಿಎಸ್ ಬಿಡಲಿಲ್ಲ, ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ್ದರು. ಧರಂಸಿಂಗ್ ಸರಕಾರದಲ್ಲಿ ನಾನು ಉಪಮುಖ್ಯಮಂತ್ರಿಯಾಗಿದ್ದೆ. ಆ ಸ್ಥಾನದಿಂದ ನನ್ನನ್ನು ವಜಾ ಮಾಡಿದರು. ಇದಾದ ವರ್ಷದ ನಂತರ ನಾನು ಕಾಂಗ್ರೆಸ್ ಸೇರಿದ್ದು. ನಾನು ಕಾಂಗ್ರೆಸ್ ಸೇರುವಾಗ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ, ವಿರೋಧ ಪಕ್ಷದ ಸ್ಥಾನದಲ್ಲಿತ್ತು’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News