'ಮಧ್ಯಂತರ ಚುನಾವಣೆ' ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು ?

Update: 2019-11-27 18:06 GMT

ಬೆಂಗಳೂರು, ನ.27: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯ ಬಳಿಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಬಹುದು ಎಂದು ಕಾಂಗ್ರೆಸ್-ಜೆಡಿಎಸ್ ಹಗಲು ಕನಸು ಕಾಣುತ್ತಿದ್ದು, ಅದು ಎಂದಿಗೂ ನನಸಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಬುಧವಾರ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಐಟಿಐ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಪರವಾಗಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

15 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಈ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತೇನೆ. 15 ವಿಧಾನಸಭಾ ಕ್ಷೇತ್ರಗಳಲ್ಲಿ ಕೆ.ಆರ್.ಪುರ ಕ್ಷೇತ್ರದ ಅಭ್ಯರ್ಥಿ ಭೈರತಿ ಬಸವರಾಜ್ ಅತೀ ಹೆಚ್ಚು ಮತಗಳ ಅಂತರದಿಂದ ದಾಖಲೆಯ ಗೆಲುವು ಸಾಧಿಸುವುದು ನಿಶ್ಚಿತ. ನಾನು ಮುಖ್ಯಮಂತ್ರಿ ಆಗಲು ಭೈರತಿ ಬಸವರಾಜ್ ಕೊಡುಗೆ ಅಪಾರವಾದದ್ದು ಎಂದು ಅವರು ಹೇಳಿದರು.

ಕಾಂಗ್ರೆಸ್ ಸರಕಾರದ ಅಧಿಕಾರವಧಿಯಲ್ಲೇ ಬಸವರಾಜ್ ಸಚಿವರಾಗಬಹುದಾಗಿತ್ತು. ಆದರೆ, ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಈ ಉಪ ಚುನಾವಣೆಯಲ್ಲಿ ಬಸವರಾಜ್ ಗೆಲುವು ಸಾಧಿಸಿದ ತಕ್ಷಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ರಾಜ್ಯದ ಜನತೆ ಜೊತೆ ಚೆಲ್ಲಾಟ ಆಡುತ್ತಿದ್ದ ಸರಕಾರ ನಮಗೆ ಬೇಡ ಎಂದು 17 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಈ ಕ್ಷೇತ್ರದ ಮಾಜಿ ಶಾಸಕ ನಂದೀಶ್ ರೆಡ್ಡಿಗೆ ಭರವಸೆ ನೀಡುತ್ತೇನೆ. ನೀವಿಬ್ಬರೂ ಜೋಡೆತ್ತುಗಳ ರೀತಿಯಲ್ಲಿ ಕೆಲಸ ಮಾಡಿ, ಕೆ.ಆರ್.ಪುರ ಕ್ಷೇತ್ರವನ್ನು ನಾನು ನಂಬರ್ 1 ಕ್ಷೇತ್ರವಾಗಿ ಅಭಿವೃದ್ಧಿಪಡಿಸುತ್ತೇನೆಂದು ಮಾತುಕೊಡುತ್ತೇನೆ ಎಂದು ಅವರು ಹೇಳಿದರು.

ಭೈರತಿ ಬಸವರಾಜ್ ಹೋರಾಟ ಮಾಡುವ ಸ್ವಭಾವದ ವ್ಯಕ್ತಿ. ವನವಾಸ ಅನುಭವಿಸಿದ್ದಾರೆ. ಎಲ್ಲರಲ್ಲೂ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ಎಲ್ಲ ಕಾರ್ಯಕರ್ತರು, ಮುಖಂಡರು ಮನೆ ಮನೆಗೆ ಹೋಗಿ ಮತದಾರರನ್ನು ಭೇಟಿ ಮಾಡಿ, ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಪರ ಮತ ಚಲಾಯಿಸುವಂತೆ ಮನವೊಲಿಸಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಮುಂದಿನ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು. ಕೆ.ಆರ್.ಪುರ ರೈಲ್ವೆ ನಿಲ್ದಾಣದಿಂದ ವೈಟ್‌ಫೀಲ್ಡ್‌ ವರೆಗೆ ಮೆಟ್ರೋ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆ ಶೀಘ್ರದಲ್ಲೆ ಅನುಷ್ಠಾನಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳಡಿಯಲ್ಲಿ ರಾಜ್ಯದ ಎಲ್ಲ ಬಡವರಿಗೆ ಮನೆ ಕಲ್ಪಿಸಿಕೊಡಲು ಮುಂದಿನ ಮೂರು ವರ್ಷಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ರೈತರ ಕಲ್ಯಾಣ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಮಾಜಿ ಶಾಸಕ ನಂದೀಶ್ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಭೈರತಿ ಬಸವರಾಜ್ ರಾಜೀನಾಮೆ ನೀಡಿದ್ದಾರೆ. ಅವರಿಗೆ ಬೆಂಬಲ ಕೊಟ್ಟು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಪಕ್ಷಕ್ಕಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತೇವೆ. ಅತೀ ಹೆಚ್ಚು ಮತಗಳ ಅಂತರದಿಂದ ಅವರು ಗೆಲುವು ಸಾಧಿಸಲಿದ್ದಾರೆ. ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಖಾಲಿ ಮಾಡುತ್ತೇವೆ ಎಂದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಅಪವಿತ್ರ ಮೈತ್ರಿ ಸರಕಾರದಿಂದ ಅಭಿವೃದ್ಧಿ ಕುಂಠಿತವಾಗಿದೆ. ಬಸವರಾಜ್ ಬಿಜೆಪಿಗೆ ಬರುವ ಮುನ್ನವೇ ಕೆ.ಆರ್.ಪುರ ಕ್ಷೇತ್ರದ ಅಭಿವೃದ್ಧಿಗೆ ಸರಕಾರ 750 ಕೋಟಿ ರೂ.ಬಿಡುಗಡೆ ಮಾಡಿದೆ. ಮುಂಬೈಯಲ್ಲಿ ಅವರ ಜೊತೆ 12 ದಿನ ಇದ್ದೆ. ಅಲ್ಲಿ ಸುಖವಾಗಿರಲು ಹೋಗಿರಲಿಲ್ಲ ಎಂದರು.

ಕೆ.ಆರ್.ಪುರದಲ್ಲಿ ಅಭಿವೃದ್ಧಿಪರ ಬದಲಾವಣೆ ಬರುತ್ತಿದೆ. ಎಲ್ಲ ಸಮುದಾಯಗಳು ಬಸವರಾಜ ಗೆದ್ದು ಸಚಿವರಾಗಬೇಕೆಂದು ಬಯಸುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಪ್ರಚಾರಕ್ಕೆ ಹೋಗಲು ಮೂಲೆ ಸಿಗುತ್ತಿಲ್ಲ. ಮತಗಟ್ಟೆ ಬಳಿ ಟೇಬಲ್ ಹಾಕಲು ಜನ ಇಲ್ಲ. ಬಸವರಾಜ್ ಗೆಲ್ಲಿಸುವ ಮೂಲಕ ನನ್ನ ಮರ್ಯಾದೆ ಉಳಿಸಿ ಎಂದು ಅವರು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಪ್ರಥಮ ಬಾರಿ ಇಲ್ಲಿಗೆ ಬಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ಬಡವರ ಕಣ್ಣೀರು ಒರೆಸುವ ಕೆಲಸ ಮಾಡುವೆ, ಬಿಜೆಪಿಗೆ ಮತ ನೀಡಿ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News