ಜೆಡಿಎಸ್ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ಆರೋಪ: ಚು.ಆಯೋಗಕ್ಕೆ ದೂರು

Update: 2019-11-27 13:39 GMT

ಬೆಂಗಳೂರು, ನ.27: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತಿರುವ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಇಲ್ಲಿನ ಬಸವೇಶ್ವರ ನಗರ ಪೊಲೀಸ್ ಠಾಣಾಧಿಕಾರಿ ಸೋಮಶೇಖರ್, ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಯಾರೂ ಕೆಲಸ ಮಾಡಬಾರದೆಂದು ಎಚ್ಚರಿಕೆ ನೀಡುತ್ತಿದ್ದಾರೆ. ಇದರಿಂದಾಗಿ ಜೆಡಿಎಸ್ ಕಾರ್ಯಕರ್ತರು ಭಯಭೀತರಾಗಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಪ್ರಕಾಶ್ ಒತ್ತಾಯಿಸಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರವು ಜೆಡಿಎಸ್‌ನ ಭದ್ರಕೋಟೆಯಾಗಿದೆ. ಇಲ್ಲಿನ ಜೆಡಿಎಸ್‌ನ ಕಾರ್ಯಕರ್ತರು ಉತ್ಸಾಹದಿಂದಲೇ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಬಸವೇಶ್ವರ ನಗರ ಪೊಲೀಸ್ ಠಾಣಾಧಿಕಾರಿ ಸೋಮಶೇಖರ್, ಜೆಡಿಎಸ್ ವಿರುದ್ಧವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಅನರ್ಹ ಶಾಸಕ ಗೋಪಾಲಯ್ಯಗೆ ಸೋಲಿನ ಭೀತಿ ಕಾಣುತ್ತಿದೆ. ಹೀಗಾಗಿ ಮತದಾರರನ್ನು ಹಣಕೊಟ್ಟು ಖರೀದಿಸುವುದು, ಪೊಲೀಸರಿಂದ ಬೆದರಿಕೆ ಹಾಕಿಸುವ ಮಟ್ಟಕ್ಕೆ ಇಳಿದಿದ್ದಾರೆ. ಇಷ್ಟಾಗಿಯೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಅನರ್ಹ ಶಾಸಕ ಗೋಪಾಲಯ್ಯಗೆ ಹಣ ಎಲ್ಲಿಂದ ಬರುತ್ತಿದೆಯೆಂದು ಕ್ಷೇತ್ರದ ಮತದಾರರೇ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಮೌನವಹಿಸಿದ್ದಾರೆ. ಅಧಿಕಾರಿಗಳ ಈ ಮೌನವನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ನಾಯಕರು, ಜೆಡಿಎಸ್ ಕಾರ್ಯಕರ್ತರನ್ನು ಬೆದರಿಸುವಂತಹ ಕೆಲಸಕ್ಕೆ ಮುಂದಾಗಿದ್ದಾರೆಂದು ಅವರು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಡಾ.ಗಿರೀಶ್ ನಾಶಿ ಸಂಭಾವಿತ ವ್ಯಕ್ತಿ. ಇವರಿಗೆ ಜಾತಿ ನಿಂದನೆ ಮಾಡಿ ಅವಮಾನಿಸಿರುವ ಘಟನೆ ನಡೆದಿದೆ. ಎಲ್ಲವನ್ನು ಮತದಾರರು ನೋಡುತ್ತಿದ್ದು, ಮತದಾನದಲ್ಲಿ ಸೂಕ್ತ ಉತ್ತರ ಕೊಡಲಿದ್ದಾರೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News