ಬಿಜೆಪಿ ಪರ ಪ್ರಚಾರ: ಕಾಂಗ್ರೆಸ್‌ನಿಂದ ಮತ್ತೇ ಮೂವರ ಉಚ್ಚಾಟನೆ
ಬೆಂಗಳೂರು, ನ.27: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಆರೋಪದ ಮೇಲೆ ಪಾಲಿಕೆಯ ಇಬ್ಬರು ಕಾಂಗ್ರೆಸ್ ಸದಸ್ಯರು ಮತ್ತು ಮುಖಂಡರೋರ್ವರನ್ನು ಕಾಂಗ್ರೆಸ್ ಉಚ್ಚಾಟನೆ ಮಾಡಿದೆ.
ಶಿವಾಜಿನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿರುವ ಬಿಬಿಎಂಪಿಯ ಕಾಂಗ್ರೆಸ್ ಸದಸ್ಯರಾದ ಜಯಮಹಲ್ ವಾರ್ಡ್‌ನ ಎಂ.ಕೆ ಗುಣಶೇಖರ್, ರಾಮಸ್ವಾಮಿ ಪಾಳ್ಯ ವಾರ್ಡ್‌ನ ನೇತ್ರಾವತಿ ಕೃಷ್ಣೇಗೌಡ ಮತ್ತು ಸಂಪಂಗಿ ರಾಮನಗರ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.
ಈ ಮೂರು ಮಂದಿ ಶಿವಾಜಿನಗರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿರುವ ದೂರುಗಳು ಫೋಟೋ ಸಮೇತ ಕೆಪಿಸಿಸಿಗೆ ಬಂದಿವೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರ ಆದೇಶದ ಮೇರೆಗೆ ಉಚ್ಚಾಟನೆ ಮಾಡುತ್ತಿರುವುದಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಜಿ ಶಫಿವುಲ್ಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.