ಬಿಬಿಎಂಪಿಯ ನಾಲ್ಕು ಕ್ಷೇತ್ರಗಳಲ್ಲಿ ಉಪಚುನಾವಣೆ: ಇಲ್ಲಿದೆ ಮತದಾರರು, ಅಭ್ಯರ್ಥಿಗಳ ವಿವರ

Update: 2019-11-27 16:04 GMT

ಬೆಂಗಳೂರು, ನ.27: ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಡಿ.5ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತ ಎಣಿಕೆ ಪ್ರಕ್ರಿಯೆ ಡಿ.9ರಂದು ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ ಎಂದು ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆ.ಆರ್. ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ಮತ್ತು ಶಿವಾಜಿನಗರದಲ್ಲಿ ಡಿ.5ರಂದು ಮತದಾನ ಮತ್ತು ಡಿ.9ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಡಿ.11ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

56 ಅಭ್ಯರ್ಥಿಗಳು ಕಣದಲ್ಲಿ: ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್. ಪುರದಿಂದ 13, ಯಶವಂತಪುರದಿಂದ 12, ಮಹಾಲಕ್ಷ್ಮೀ ಲೇಔಟ್‌ನಿಂದ 12 ಮತ್ತು ಶಿವಾಜಿನಗರದಿಂದ 19 ಜನ ಕಣದಲ್ಲಿದ್ದು, ಒಟ್ಟು ಈ ನಾಲ್ಕು ಕ್ಷೇತ್ರಗಳಿಂದ ಒಟ್ಟು 56 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

14,48,523 ಮತದಾರರು: ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್. ಪುರನಲ್ಲಿ 4,87,857 ಮತದಾರರಲ್ಲಿ ಪುರುಷರು- 2,55,465, ಮಹಿಳೆಯರು-2,32,228 ಹಾಗೂ ಇತರರು 164 ಜನ ಇದ್ದಾರೆ. ಯಶವಂತಪುರದಲ್ಲಿ 4,80,953 ಮತದಾರರಲ್ಲಿ ಪುರುಷರು- 2,48,842, ಮಹಿಳೆಯರು-2,32,066 ಹಾಗೂ ಇತರರು 45 ಜನ ಇದ್ದಾರೆ. ಮಹಾಲಕ್ಷ್ಮೀ ಲೇಔಟ್‌ನಲ್ಲಿ 2,85,869 ಮತದಾರರಲ್ಲಿ ಪುರುಷರು- 1,47353, ಮಹಿಳೆಯರು- 1,38474 ಹಾಗೂ ಇತರರು 42 ಜನ ಇದ್ದಾರೆ. ಮತ್ತು ಶಿವಾಜಿನಗರದಲ್ಲಿ 1,93,844 ಮತದಾರರಲ್ಲಿ ಪುರುಷರು- 98,024, ಮಹಿಳೆಯರು- 95,816 ಹಾಗೂ ಇತರರು 4 ಜನ ಇದ್ದಾರೆ.

29,858 ಹೊಸ ಮತದಾರರು: ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್. ಪುರನಲ್ಲಿ 12,445, ಯಶವಂತಪುರದಲ್ಲಿ 7,606, ಮಹಾಲಕ್ಷ್ಮೀ ಲೇಔಟ್‌ನಲ್ಲಿ 4,506, ಶಿವಾಜಿನಗರದಲ್ಲಿ 5,301 ಹೊಸ ಮತದಾರರಿದ್ದಾರೆ. ಇವರಿಗೆ ನ.28ರಿಂದ ಡಿ.1ರವರೆಗೆ ಮತದಾರರ ಚೀಟಿ ಮತ್ತು ವೋಟರ್ ಸ್ಲಿಪ್ ನೀಡಲಾಗುತ್ತದೆ.

ಮತಗಟ್ಟೆಗಳು: ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್.ಪುರಂನಲ್ಲಿ 437, ಯಶವಂತಪುರದಲ್ಲಿ 461, ಮಹಾಲಕ್ಷ್ಮೀ ಲೇಔಟ್‌ನಲ್ಲಿ 270, ಶಿವಾಜಿನಗರದಲ್ಲಿ 193. ಒಟ್ಟು 1,361 ಮತಗಟ್ಟೆಗಳಿವೆ.

ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ, ಸಲಹೆ, ಆಕ್ಷೇಪಣೆ ನೀಡಲು ಡಿಸ್ಟಿಕ್ ಕಾನ್ಟಾಕ್ಟ್ ಸೆಂಟರನ್ನು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಲಾಗಿದೆ ಮತ್ತು ಹೆಚ್ಚಿನ ಯಾವುದೇ ಮಾಹಿತಿ ಮತ್ತು ದೂರುಗಳನ್ನು ನೀಡಲು ಉಚಿತ ದೂರವಾಣಿ ಸಂಖ್ಯೆ 1950ಗೆ ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News