ಏಶ್ಯನ್ ಆರ್ಚರಿ ಟೂರ್ನಿ: ಅಭಿಷೇಕ್-ಜ್ಯೋತಿ ಸುರೇಖಾಗೆ ಚಿನ್ನ

Update: 2019-11-27 17:58 GMT

ಬ್ಯಾಂಕಾಕ್, ನ.27: ಇಲ್ಲಿ ನಡೆಯುತ್ತಿರುವ 21ನೇ ಆವೃತ್ತಿಯ ಏಶ್ಯನ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನಂ ಕಾಂಪೌಂಡ್ ಮಿಕ್ಸೆಡ್ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದರು. ಈ ಮೂಲಕ ಭಾರತ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಬುಧವಾರ ಅಂತ್ಯಗೊಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 7 ಪದಕಗಳನ್ನು ಜಯಿಸಿದೆ.

ಚೈನೀಸ್‌ತೈಪೆಯ ಎದುರಾಳಿ ಯಿ-ಸುಯಾನ್ ಚೆನ್ ಹಾಗೂ ಚಿಹ್-ಲುಹ್ ಚೆನ್‌ರನ್ನು ಅಭಿಷೇಕ್-ಜ್ಯೋತಿ ಜೋಡಿ 158-151 ಅಂಕಗಳ ಅಂತರದಿಂದ ಮಣಿಸಿತು. ಭಾರತ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳೊಂದಿಗೆ ಟೂರ್ನಿಯಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತು.

ಇದಕ್ಕೂ ಮೊದಲು ನಡೆದ ಕಾಂಪೌಂಡ್ ಟೀಮ್ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ ಕೇವಲ ಒಂದು ಅಂಕದಿಂದ ಚಿನ್ನದ ಪದಕದಿಂದ ವಂಚಿತರಾದರು. ಕೊರಿಯಾದ ಆಟಗಾರನಿಗೆ 232-233 ಅಂಕದಿಂದ ಶರಣಾದ ಅಭಿಷೇಕ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಭಾರತ ಕಾಂಪೌಂಡ್ ಮಹಿಳಾ ಟೀಮ್ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಜ್ಯೋತಿ, ಮಸ್ಕಾನ್ ಕಿರಾರ್ ಹಾಗೂ ಪ್ರಿಯಾ ಗುರ್ಜರ್ ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಕೊರಿಯಾ ತಂಡವನ್ನು 215-231 ಅಂಕದಿಂದ ಮಣಿಸಿತು.

ಅಭಿಷೇಕ್ ಹಾಗೂ ಜ್ಯೋತಿ ಕಾಂಪೌಂಡ್ ಮಿಕ್ಸೆಡ್ ಫೈನಲ್‌ನಲ್ಲಿ 39 ಅಂಕ ಗಳಿಸಿ ಉತ್ತಮ ಆರಂಭ ಪಡೆದಿದ್ದು, ಮೊದಲ ಸುತ್ತಿನ ಅಂತ್ಯಕ್ಕೆ 2 ಅಂಕ ಮುನ್ನಡೆ ಪಡೆದರು. ಎರಡನೇ ಸುತ್ತಿನಲ್ಲಿ ನಾಲ್ಕು ಅಂಕ ಮುನ್ನಡೆ ಪಡೆದು ಚಿನ್ನದ ಪದಕ ಗೆಲ್ಲುವತ್ತ ಹೆಜ್ಜೆ ಇಟ್ಟರು. ಮೂರನೇ ಸುತ್ತಿನಲ್ಲಿ ಅಭಿಷೇಕ್ ಹಾಗೂ ಜ್ಯೋತಿ ಸ್ಥಿರ ಪ್ರದರ್ಶನ ನೀಡಿ 39 ಅಂಕ ಗಳಿಸಿದರು.ಅಂತಿಮ ಸುತ್ತಿನಲ್ಲಿ ಮತ್ತೊಮ್ಮೆ ಸರಿಯಾಗಿ 40 ಅಂಕ ಗಳಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರು.

ಇದಕ್ಕೂ ಮೊದಲ ಭಾರತ ರಿಕರ್ವ್ ಸ್ಪರ್ಧೆಗಳಲ್ಲಿ ನಾಲ್ಕು ಕಂಚಿನ ಪದಕಗಳನ್ನು ಜಯಿಸಿತು. ಅತನು ದಾಸ್ ಪ್ರಮುಖ ಪಾತ್ರವಹಿಸಿದರು. ಪುರುಷರ ಆರ್ಚರಿ ತಂಡ ಈಗಾಗಲೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ಸ್ ಕೋಟಾವನ್ನು ಭರ್ತಿ ಮಾಡಿದೆ. ಮಹಿಳಾ ತಂಡ ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News