×
Ad

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದೇ ಅನರ್ಹರಿಂದ: ಸಚಿವ ಸಿ.ಟಿ.ರವಿ

Update: 2019-11-28 19:44 IST

ಬೆಂಗಳೂರು, ನ.28: 17 ಜನರು ರಾಜಮಾರ್ಗದಲ್ಲಿ ರಾಜೀನಾಮೆ ನೀಡಿ ಚುನಾವಣೆ ಎದುರಿಸುತ್ತಿದ್ದಾರೆ. ಹೌದು, 17 ಶಾಸಕರ ರಾಜೀನಾಮೆಯಿಂದಲೇ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಸಮರ್ಥಿಸಿಕೊಂಡರು.

ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈತಿಕತೆ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್‌ನ ಆರು ಮಂದಿ ಶಾಸಕರನ್ನು ಹೈಜಾಕ್ ಮಾಡಿದಾಗ ಪವಿತ್ರ ಆಗಿತ್ತಾ. ಇದರ ಬಗ್ಗೆ ಯಾವುದೇ ಸಾಹಿತಿ, ಜಾತ್ಯತೀತರು ಹಾಗೂ ಬುದ್ಧಿಜೀವಿಗಳು ಚಕಾರ ಎತ್ತಿಲ್ಲ. 17 ಜನರು ರಾಜಮಾರ್ಗದಲ್ಲಿ ರಾಜೀನಾಮೆ ನೀಡಿ ಚುನಾವಣೆ ಎದುರಿಸುತ್ತಿದ್ದಾರೆ. ಹೌದು, 17 ಶಾಸಕರ ರಾಜೀನಾಮೆಯಿಂದಲೇ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಸಮರ್ಥಿಸಿಕೊಂಡರು.

ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ರಾಜಕೀಯ ವ್ಯಭಿಚಾರ ಏನು ಅನ್ನೋದನ್ನ ಅವರದ್ದೇ ಪಕ್ಷದ ಮಾಜಿ ಸಂಸದ ಮುನಿಯಪ್ಪರನ್ನು ಕೇಳಿದರೆ ಒಳಿತು. ತನ್ನ ಪಕ್ಷದಿಂದ ಎರಡು ಬಾರಿ ಶಾಸಕರನ್ನಾಗಿ ಮಾಡಿದವರನ್ನು ಈಗ ಬಾಂಬೆ ಕಳ್ಳ ಎಂದು ಕರೆಯುತ್ತಾರೆ. ಪಕ್ಷದಲ್ಲಿದ್ದರೆ ಸಂಪನ್ನ, ಪಕ್ಷ ಬಿಟ್ಟರೆ ಕಳ್ಳ, ಪಕ್ಷದಲ್ಲಿದ್ದವರು ಏನು ಮಾಡಿದರೂ ಸಾಚಾಗಳು, ಪಕ್ಷ ಬಿಟ್ಟವರು ಪರಮ ಭ್ರಷ್ಟರಾಗುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಮೈತ್ರಿ ಸರಕಾರ ರಿಮೋಟ್ ಕಂಟ್ರೋಲ್ ಸರಕಾರ ಎಂದು ಸ್ವಪಕ್ಷೀಯರಿಂದಲೇ ಆರೋಪಕ್ಕೆ ಒಳಗಾಗಿತ್ತು. ಇದೀಗ ಎರಡೂ ಪಕ್ಷಗಳ ನಾಯಕರು ಡಿ.9 ರ ಬಳಿಕ ಮತ್ತೊಮ್ಮೆ ಅಧಿಕಾರ ನಡೆಸುವ ಕನಸು ಕಾಣುತ್ತಿದ್ದಾರೆ ಎಂದರು.

ವಿಧಾನಸೌಧದಲ್ಲಿ ನಡೆಸಬೇಕಾದ ಆಡಳಿತವನ್ನು ದಿಢೀರನೆ ಹೊಟೇಲ್‌ಗಳಿಗೆ ಸ್ಥಳಾಂತರ ಮಾಡಿದ್ದರು. ಹೊಟೇಲ್ ಅನ್ನು ಡೀಲಿಂಗ್ ಅಡ್ಡ ಮಾಡಿಕೊಂಡಿದ್ದರು ಎಂದು ಆಪಾದಿಸಿದ ಅವರು, ಇಡೀ ಪಕ್ಷವೇ ಹೋಲ್ ಸೇಲ್ ಡೀಲಿಂಗ್‌ಗೆ ನಿಂತಾಗ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸುವುದೇ ರಾಜಮಾರ್ಗ ಎಂದು ಅನರ್ಹ ಶಾಸಕರು ಅರಿತುಕೊಂಡಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಕಾಂಗ್ರೆಸ್ 123, ಬಿಜೆಪಿ 48, ಜೆಡಿಎಸ್ 40 ಇದ್ದವು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು 104, ಕಾಂಗ್ರೆಸ್ 78, ಜೆಡಿಎಸ್ 37 ಕ್ಕೆ ಇಳಿದವು. ಇವರ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಒಂದಂಕಿಗೆ ಇಳಿಸುವ ಘೋಷಣೆಯೊಂದಿಗೆ ನಡೆಸಿದ ಪ್ರಚಾರ ಫಲಿತಾಂಶ ಏನಾಯಿತು. ಒಂದೊಂದು ಸ್ಥಾನ ಗೆದ್ದರು ಎಂದು ಅಪಹಾಸ್ಯ ಮಾಡಿದರು.

ನಾವು ಮೈಲ್ಡ್ ಹಿಂದುತ್ವ, ಶಿವಸೇನೆ ವೈಲ್ಡ್ ಹಿಂದುತ್ವ. ಅಂತಹುದರಲ್ಲಿ ಅವರ ಸಂಪರ್ಕಕ್ಕೆ ಬಂದು ಜಾತ್ಯತೀತರಾಗುತ್ತಾರೆ. ಮಹಾರಾಷ್ಟ್ರದಲ್ಲಿ ಎಷ್ಟು ದಿನ ಅಧಿಕಾರವಿರುತ್ತದೆ ನೋಡೋಣ. ಕರ್ನಾಟಕದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.

ದೇವೇಗೌಡರು ಸರಕಾರ ಬೀಳಿಸಲು ಬಿಡಲ್ಲ ಎಂದು ಯಾವ ದೃಷ್ಟಿಕೋನದಲ್ಲಿ ಹೇಳಿದರೋ ಗೊತ್ತಿಲ್ಲ. 40 ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದವರಿಗೇ ಅವರ ಯೋಚನೆ ಅರ್ಥ ಮಾಡಿಕೊಳ್ಳೋಕೆ ಕಷ್ಟ. ನಾನಿನ್ನೂ ಸಣ್ಣವ, ನಂಗೇನ್ ಅರ್ಥವಾಗುತ್ತದೆ. ಸರಕಾರದ ಬಂಗಲೆ ಖಾಲಿ ಮಾಡದೆ, ಅನ್ಯರ ಹೆಸರಿನಲ್ಲಿರುವ ಬಂಗಲೆಯಲ್ಲಿ ವಾಸಿಸುವ ಸಿದ್ದರಾಮಯ್ಯ ನಮಗೇ ನೈತಿಕತೆ ಪಾಠ ಹೇಳುತ್ತಾರೆ.

 -ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News