×
Ad

ಪ್ರಧಾನಮಂತ್ರಿ ‘ಮಾನ್-ಧನ್’ ಯೋಜನೆಯಡಿ 6 ಲಕ್ಷ ಅಸಂಘಟಿತ ಕಾರ್ಮಿಕರ ನೋಂದಣಿ ಗುರಿ

Update: 2019-11-28 19:51 IST

ಬೆಂಗಳೂರು, ನ. 29: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಪ್ರಧಾನಮಂತ್ರಿ ‘ಮಾನ್-ಧನ್’ ಯೋಜನೆಯಡಿ ರಾಜ್ಯದ 6 ಲಕ್ಷ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಣಿ ಮಾಡಲು ಉದ್ದೇಶಿಸಲಾಗಿದೆ ಎಂದು ಕಾರ್ಮಿಕ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ

ಗುರುವಾರ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಉದ್ದೇಶಿತ ಯೋಜನೆಯಡಿಯಲ್ಲಿ ಕಾರ್ಮಿಕರು ಮಾಸಿಕ 200 ರೂಪಾಯಿ ಪಾವತಿಸಿದರೆ 60 ವರ್ಷ ವಯಸ್ಸಾದಾಗ ಮಾಸಿಕ 3 ಸಾವಿರ ರೂ.ನಿವೃತ್ತಿ ವೇತನ ಪಡೆಯಬಹುದಾಗಿದೆ ಎಂದು ತಿಳಿಸಿದರು.

‘ಸ್ವಿಗ್ಗಿ, ಝೊಮಾಟೋ, ಓಲಾ, ಉಬರ್ ಸೇರಿ ಆ್ಯಪ್ ಆಧಾರಿತ ನವ ಕಾರ್ಮಿಕ ವಲಯದ ಸಿಬ್ಬಂದಿ ಸೇವಾ ಭದ್ರತೆಯ ಕುರಿತು ನಿಯಮಗಳನ್ನು ರೂಪಿಸುವಲ್ಲಿ ರಾಷ್ಟ್ರೀಯ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

ಏಕ ಗವಾಕ್ಷಿ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕ ಸಹಾಯವಾಣಿ ಆರಂಭಕ್ಕೆ ಈಗಾಗಲೇ ಕ್ರಮವಹಿಸಲಾಗಿದೆ. 2020ರ ಜನವರಿ ವೇಳೆಗೆ 24 ಗಂಟೆ ಕಾರ್ಯನಿರ್ವಹಿಸುವ ಕಾರ್ಮಿಕ ಸಹಾಯವಾಣಿ ಆರಂಭ ಮಾಡಲಾಗುವುದು ಎಂದು ಹೇಳಿದರು.

ಸ್ಥಳೀಯ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ನೇಮಕಾತಿ ಪ್ರಾತಿನಿಧ್ಯ, ಅಂಗಡಿ ಮುಂಗಟ್ಟುಗಳು ವರ್ಷದ 365 ದಿನವೂ ತೆರೆದಿರಬಹುದಾದ ಮಸೂದೆಗೆ ಅನುಮೋದನೆ, ಗೊಂಬೆ ತಯಾರಿಕಾ ಘಟಕದ ನೌಕರರಿಗೂ ಕನಿಷ್ಠ ವೇತನ ಸೇರಿದಂತೆ ಹಲವು ಮಸೂದೆಗಳಿಗೆ ಅನುಮೋದನೆ ದೊರಕಿಸಿಕೊಡಲಾಗಿದೆ ಎಂದರು.

ಕಟ್ಟಡ ಕಾರ್ಮಿಕರ ಮಕ್ಕಳ ಆರೈಕೆಗೆ ಬೆಂಗಳೂರು ನಗರದಲ್ಲಿ 10 ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ಐದು ಕೇಂದ್ರಗಳು ಸೇವೆಗೆ ಸಿದ್ಧವಾಗಿವೆ. ಉಳಿದ 5 ಕೇಂದ್ರಗಳು ಡಿ.25ರೊಳಗೆ ಪೂರ್ಣಗೊಳ್ಳಲಿವೆ ಎಂದು ಅವರು ವಿವರ ನೀಡಿದರು.

ಇಲಾಖೆ ಎಲ್ಲ ಸೇವೆಗಳು 2020ರ ಜನವರಿ ಅಂತ್ಯದೊಳಗೆ ಆನ್‌ಲೈನ್‌ಗೊಳ್ಳಬೇಕು ಎಂದ ಅವರು, ಕಾರ್ಮಿಕ ಬಂಧು, ಸೇವಾ ಕೇಂದ್ರಗಳ ನಿರ್ವಹಣೆ ಡಿಸೆಂಬರ್ ಅಂತ್ಯದೊಳಗೆ ಆರಂಭವಾಗಬೇಕು. ಜನಸ್ನೇಹಿ ಯೋಜನೆಗಳ ಅನುಷ್ಠಾನಕ್ಕೆ ಇಲಾಖೆ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News