ರಾಜ್ಯಸಭಾ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ.ರಾಮಮೂರ್ತಿ ನಾಮಪತ್ರ ಸಲ್ಲಿಕೆ

Update: 2019-11-29 18:06 GMT

ಬೆಂಗಳೂರು, ನ. 29: ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ.ರಾಮಮೂರ್ತಿ ಕುಟುಂಬ ಸಮೇತರಾಗಿ ವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ರಾಮಮೂರ್ತಿ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಡಿ.12ರಂದು ಉಪಚುನಾವಣೆ ನಡೆಯಲಿದ್ದು, ರಾಮಮೂರ್ತಿ ಅವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಪ್ರಕಟಿಸಿತ್ತು. ಹೀಗಾಗಿ ಸಚಿವ ಆರ್. ಅಶೋಕ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ ಜತೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ರಾಮಮೂರ್ತಿ ಅವರ ನಾಮಪತ್ರಕ್ಕೆ ಸೂಚಕರಾಗಿ ಸಿಎಂ ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಆರ್.ಅಶೋಕ್, ಶಾಸಕರಾದ ಅರವಿಲಿಂದ ಲಿಂಬಾವಳಿ, ಜ್ಯೋತಿ ಗಣೇಶ್, ಕೆ.ಜಿ.ಬೋಪಯ್ಯ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಬಿ.ಜಿ.ನಾಗೇಶ್, ಬೆಳ್ಳಿ ಪ್ರಕಾಶ್ ಸಹಿ ಹಾಕಿದ್ದಾರೆ.

ಗೆಲ್ಲುವ ವಿಶ್ವಾಸ: ‘ಪ್ರಧಾನಿ ಮೋದಿಯವರ ಅಭಿವೃದ್ಧಿ ಕಾರ್ಯ ನೋಡಿ ಕೆ.ಸಿ. ರಾಮಮೂರ್ತಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಇದೀಗ ಬಿಜೆಪಿಯಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದು, ಉಪಚುನಾವಣೆಯಲ್ಲಿ ಅವರು ಅಭೂತಪೂರ್ವವಾಗಿ ಗೆಲುವು ಸಾಧಿಸಲಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಮಮೂರ್ತಿ ನಮ್ಮ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ರಾಜ್ಯಸಭೆಯಲ್ಲಿ ನಮ್ಮ ಸ್ಥಾನ ಹೆಚ್ಚಾಗುತ್ತಿದೆ. ರಾಮಮೂರ್ತಿಗೆ ಯಾವುದೇ ಸವಾಲು ಇಲ್ಲ. ಯಾವುದೇ ಚುನಾವಣೆ ಇಲ್ಲದೇ ಅವರು ಜಯಿಸುತ್ತಾರೆ ಎಂದು ಹೇಳಿದರು.

‘ಆದಾಯ ತೆರಿಗೆ (ಐಟಿ) ಇಲಾಖೆ ದಾಳಿ ಭಯಕ್ಕೆ ನಾನು ಹೆದರಿ ಬಿಜೆಪಿಗೆ ಹೋಗಿಲ್ಲ. ಈಗಾಗಲೇ ಹಲವು ಬಾರಿ ಈ ಬಗ್ಗೆ ಸ್ಪಷ್ಟಣೆ ನೀಡಿದ್ದೇನೆ. ನನ್ನ ಆತ್ಮಸಾಕ್ಷಿಗಾಗಿ ನಾನು ಬಿಜೆಪಿ ಸೇರಿದ್ದೇನೆ. ಪದೇ ಪದೆ ಐಟಿ ದಾಳಿ ಬಗ್ಗೆ ಕೇಳಬೇಡಿ. ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಮೋದಿ ಅವರ ಅಭಿವೃದ್ದಿ ಕಾರ್ಯ ನೋಡಿ ಬಿಜೆಪಿ ಸೇರಿದ್ದೇನೆ’

-ಕೆ.ಸಿ.ರಾಮಮೂರ್ತಿ, ಬಿಜೆಪಿ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News