ಬಿಜೆಪಿಯಿಂದ ಕೋಟ್ಯಂತರ ರೂ. ಪಡೆದು ರಾಜೀನಾಮೆ: ಅನರ್ಹರ ವಿರುದ್ಧ ಕೃಷ್ಣಭೈರೇಗೌಡ ವಾಗ್ದಾಳಿ

Update: 2019-11-29 12:33 GMT

ಬೆಂಗಳೂರು, ನ.29: ಅನರ್ಹ ಶಾಸಕರು ಬಿಜೆಪಿಯಿಂದ ನೀಡಿದ ಕೋಟ್ಯಂತರ ರೂ. ಹಣ ಪಡೆದು, ಅಧಿಕಾರ ಆಸೆಗಾಗಿ ಪಕ್ಷಾಂತರ ಮಾಡಿದ್ದಾರೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಇಂದಿಲ್ಲಿ ಆರೋಪಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಶಿವರಾಜ್ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೇವೆ ಎಂದು ಅನರ್ಹ ಶಾಸಕರು ಹೇಳುತ್ತಿದ್ದಾರೆ. ಅದು ಶುದ್ಧ ಸುಳ್ಳು ಎಂದು ದೂರಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಮೈತ್ರಿ ಸರಕಾರ ಹಾಗೂ ಬಿಬಿಎಂಪಿ ಕೊಟ್ಟ ನೂರಾರು ಕೋಟಿ ರೂ.ಅನುದಾನ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವ ಮೌಲ್ಯಗಳು ಕುಸಿಯುತ್ತಿವೆ. ಮತದಾರರು ತಮ್ಮ ಜೇಬಿನಲ್ಲಿಯೇ ಇದ್ದಾರೆ ಎನ್ನುವಂತೆ ಅನರ್ಹ ಶಾಸಕರು ಭಾಷಣ ಮಾಡುತ್ತಿದ್ದಾರೆ ಎಂದರು.

ಮತದಾರರಿಗೆ ಹಣ ನೀಡಿದರೆ ಸಾಕು ಮತ ಹಾಕುತ್ತಾರೆ ಎಂಬ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಅವರಿಗೆ ಮತದಾರರು ಸರಿಯಾದ ಪಾಠ ಕಲಿಸಬೇಕು. ಜೆಡಿಎಸ್ ಪಕ್ಷದ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿಗೆ ದ್ರೋಹ ಬಗೆದ ಬಿಜೆಪಿಯ ಗೋಪಾಲಯ್ಯಗೆ ಮತದಾರರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದರು.

ಅಭ್ಯರ್ಥಿ ಎಂ.ಶಿವರಾಜ್ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಆದರೆ, ಪ್ರಜ್ಞಾವಂತ ಮತದಾರರು ಇದಕ್ಕೆ ಬಲಿಯಾಗದೆ, ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದವರನ್ನು ಸೋಲಿಸಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಜಿ.ಪದ್ಮಾವತಿ, ಪಾಲಿಕೆ ಸದಸ್ಯರಾದ ಕೇಶವಮೂರ್ತಿ, ಚಂದ್ರಕಲಾ ಗಿರೀಶ್, ಲಕ್ಕಣ್ಣ, ರೂಪ ಲಿಂಗೇಶ್ವರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News