ಕೆಪಿಎಲ್‌ ಬೆಟ್ಟಿಂಗ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಐಸಿಸಿ

Update: 2019-11-29 12:43 GMT

ಬೆಂಗಳೂರು, ನ.29: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ತನಿಖೆಗೆ ಸಹಕಾರ ನೀಡುವುದಾಗಿ ತಿಳಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಇ-ಮೇಲ್ ಮೂಲಕ ಪತ್ರ ಬರೆದು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಐಸಿಸಿ ಹೇಳಿದೆ ಎಂದು ತಿಳಿಸಿದರು.

ಕೆಪಿಎಲ್‌ನ ಕೆಲ ಆಟಗಾರರು ಐಷಾರಾಮಿ ಕಾರುಗಳನ್ನಿಟ್ಟುಕೊಂಡು ಕೋಟ್ಯಧೀಶರಾಗಿದ್ದಾರೆ. ಅವರ ಐಷಾರಾಮಿ ಜೀವನಕ್ಕೆ ಹಣ ಎಲ್ಲಿಂದ ಬಂತು ಎನ್ನುವುದಕ್ಕೆ ಮ್ಯಾಚ್‌ಫಿಕ್ಸಿಂಗ್ ಉತ್ತರವಾಗಿದೆ. ರೆಸಾರ್ಟ್‌ಗಳಲ್ಲಿ ವಾಸ್ತವ್ಯ, ಮೋಜುಮಸ್ತಿಗಳಲ್ಲಿ ತೊಡಗಿದ್ದ ಮೂಲಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದ ಅವರು, ಅಮಾಯಕರು ಹಣ ಕೊಟ್ಟು ಕ್ರಿಕೆಟ್ ನೋಡುತ್ತಿದ್ದರು. ಆದರೆ, ಅಷ್ಟರಲ್ಲಾಗಲೇ ಅದು ಫಿಕ್ಸಿಂಗ್ ಆಗಿರುತ್ತಿತ್ತು. ಇದರಲ್ಲಿ ದುಬೈ ಹಾಗೂ ಅಂತರ್‌ರಾಷ್ಟ್ರೀಯ ಮೂಲದ ಬುಕ್ಕಿಗಳು ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಅವರು ಹೇಳಿದರು.

ಜಾಗೃತಿ ಅಗತ್ಯ: ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಜಾಲವನ್ನು ಪತ್ತೆ ಹಚ್ಚುವ ಕೆಲಸವು ಕೇವಲ ಪೊಲೀಸರಿಗೆ ಸೀಮಿತವಲ್ಲ. ಅಬಕಾರಿ, ಶಿಕ್ಷಣ, ರೈಲ್ವೆ, ಏರ್‌ಪೋರ್ಟ್ ಇನ್ನಿತರ ಕ್ಷೇತ್ರಗಳು ಕೂಡ ಮಾದಕವಸ್ತುಗಳ ಜಾಲವನ್ನು ಮಟ್ಟಹಾಕಲು ಶ್ರಮಿಸಬೇಕಾಗಿದೆ. ಈ ಬಗ್ಗೆ ಪೋಷಕರು ಕೂಡ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಅವರ ಚಲನವಲನಗಳು, ವರ್ತನೆಗಳ ಬಗ್ಗೆ ಗಮನವಹಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News